ಹಿಂದೂ ಮಹಾಸಾಗರದಲ್ಲಿ ಬಾಂಗ್ಲಾದ ಸರಕು ನೌಕೆ ಹೈಜಾಕ್; ಸೊಮಾಲಿಯಾ ಕಡಲ್ಗಳ್ಳರ ಕೃತ್ಯ ?

Update: 2024-03-13 16:58 GMT

Photo Credit: Vessel Finder

ಢಾಕ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬಾಂಗ್ಲಾದೇಶದ ಸರಕು ನೌಕೆಯನ್ನು ಅಪಹರಿಸಲಾಗಿದ್ದು ಹಡಗು ಈಗ ಸೊಮಾಲಿಯಾ ಕರಾವಳಿಯತ್ತ ಸಾಗುತ್ತಿದೆ ಎಂದು ವರದಿಯಾಗಿದೆ.

ಒಂದು ದೊಡ್ಡ ದೋಣಿ ಹಾಗೂ ಮತ್ತೊಂದು ಸಣ್ಣ ದೋಣಿಯಲ್ಲಿ ಬಂದ 22 ಮಂದಿ ಸಶಸ್ತ್ರಧಾರಿ ವ್ಯಕ್ತಿಗಳು ಬಾಂಗ್ಲಾ ಸರಕು ನೌಕೆಯನ್ನು ಪ್ರವೇಶಿಸಿದ್ದಾರೆ. ನೌಕೆಯ ಸಿಬಂದಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬ್ರಿಟನ್ನ `ಕಡಲಪ್ರದೇಶ ವ್ಯಾಪಾರ ನಿರ್ವಹಣೆ'(ಯುಕೆಎಂಟಿಒ) ವರದಿ ಮಾಡಿದೆ. ಬಾಂಗ್ಲಾದೇಶದ ಧ್ವಜವನ್ನು ಹೊಂದಿದ್ದ ಸರಕು ನೌಕೆಯಲ್ಲಿ 55,000 ಟನ್ಗಳಷ್ಟು ಕಲ್ಲಿದ್ದಲು ಇದ್ದು ಮೊಝಾಂಬಿಕ್ನಿಂದ ಯುಎಇ ಕಡೆ ಪ್ರಯಾಣಿಸುತ್ತಿತ್ತು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುಮಾರು 20ರಷ್ಟಿದ್ದ ಕಡಲ್ಗಳ್ಳರ ಗುಂಪು ಸರಕುನೌಕೆಯನ್ನು ಅಪಹರಿಸಿದೆ. ಅಂತಿಮ ಮಾಹಿತಿಯ ಪ್ರಕಾರ, ಸರಕು ನೌಕೆಯನ್ನು ಸೊಮಾಲಿಯಾ ಕರಾವಳಿ ತೀರದತ್ತ ಕೊಂಡೊಯ್ಯಲಾಗುತ್ತಿದೆ. ಆದರೆ ಇದು ಸೊಮಾಲಿಯಾದ ಕಡಲ್ಗಳ್ಳರ ಕೃತ್ಯ ಎಂಬುದು ದೃಢಪಟ್ಟಿಲ್ಲ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.

ಘಟನೆಯ ನಂತರ ಈ ಪ್ರದೇಶದಲ್ಲಿ ಪ್ರಯಾಣಿಸುವ ಹಡಗುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದ್ದು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಯುಕೆಎಂಟಿಒ ಹೇಳಿದೆ. 2023ರ ನವೆಂಬರ್ನಿಂದ ಏಡನ್ ಕೊಲ್ಲಿ ಅಥವಾ ಸೊಮಾಲಿಯಾ ಕಡಲ ಪ್ರದೇಶದಲ್ಲಿ 20ಕ್ಕೂ ಅಧಿಕ ಹಡಗು ಅಪಹರಣ ಅಥವಾ ಅಪಹರಣಕ್ಕೆ ಪ್ರಯತ್ನಗಳು ನಡೆದಿವೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News