ಬ್ರೆಝಿಲ್ | ಭೂಕುಸಿತ, 200 ಮಂದಿ ಸಿಲುಕಿರುವ ಭೀತಿ
ಬ್ರಸೀಲಿಯಾ : ಬ್ರೆಝಿಲ್‍ನ ಅಮೆಜೋನಾಸ್ ರಾಜ್ಯದ ಮನಕಾಪುರ್ ಬಂದರು ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 200 ಮಂದಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.
ಅಮೆಝಾನ್ ನದಿಯ ದಡದಲ್ಲಿರುವ ಟೆರ್ರಾ ಪ್ರೆಟಾ ಬಂದರಿನ ಆಧಾರ ಗೋಡೆಯ ಭಾಗ ಕುಸಿದು ದುರಂತ ಸಂಭವಿಸಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಹಂತದಲ್ಲಿದ್ದರೂ ಬಂದರು ಪ್ರಮುಖ ಸಾರಿಗೆ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಿತ್ತು. ಭೂಕುಸಿತ ಸಂಭವಿಸಿದಾಗ ಇಲ್ಲಿ ಸುಮಾರು 200 ಜನರು ಸರಕುಗಳ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಯದಲ್ಲಿ ನಿರತರಾಗಿದ್ದರು. ನದಿ ದಂಡೆಯ ಸವೆತ ಭೂಕುಸಿತಕ್ಕೆ ಕಾರಣವಾಗಿರಬಹುದು. ಅಲ್ಲದೆ ಭೂಕುಸಿತ ಸಂಭವಿಸಿದಾಗ ನದಿಯಲ್ಲಿ ದೋಣಿಯಲ್ಲಿದ್ದ ಒಂದು ಕುಟುಂಬ ನೀರಿನಡಿ ಮುಳುಗಿದೆ ಎಂದು ಮತ್ತೊಂದು ವರದಿ ಹೇಳಿದೆ.
ನದಿಯ ನೀರಿನಲ್ಲಿ ದೋಣಿಯ ಅವಶೇಷ, ಪೈಪ್‍ಗಳು, ಕಟ್ಟಡಗಳ ಭಾಗಗಳು ಮತ್ತು ವಾಹನಗಳು ತೇಲಿ ಬರುತ್ತಿದೆ. ಭೂಕುಸಿತದಡಿ ಸಿಲುಕಿದವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.