ಬುರ್ಕಿನಾ ಫಾಸೊ | ಬಂಡುಕೋರರಿಂದ ಒಂದೇ ದಿನ 600 ಮಂದಿಯ ಹತ್ಯೆ ; ಶವ ಸಂಗ್ರಹಿಸಲು ಬೇಕಾಯಿತು 3 ದಿನ!

Update: 2024-10-05 11:53 GMT

PC : X \ @iGorilla19

ಟಿಟಾವೋ: ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ದೇಶದ ಭಾರ್ಸಲೋಗೋ ಪಟ್ಟಣದ ಮೇಲೆ ಆಗಸ್ಟ್ ನಲ್ಲಿ ನಡೆದ ದಾಳಿಯಲ್ಲಿ ಅಲ್-ಖೈದಾದೊಂದಿಗೆ ಸಂಯೋಜಿತವಾಗಿರುವ ಬಂಡುಕೋರರು ಕೆಲವೇ ಗಂಟೆಗಳಲ್ಲಿ ಸುಮಾರು 600 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯೊಂದು ಶುಕ್ರವಾರ ಹೇಳಿದೆ.

ಸೇನೆಯ ಆದೇಶದಂತೆ ಬಂಡುಕೋರರ ದಾಳಿಗಳಿಂದ ರಕ್ಷಿಸಿಕೊಳ್ಳಲು ಊರಿನ ಸುತ್ತ ಕಂದಕಗಳನ್ನು ಅಗೆದಿದ್ದರಿಂದ ಬುರ್ಕಿನಾ ಫಾಸೊ ದೇಶದ ಬಾರ್ಸಲೋಗೋ ನಿವಾಸಿಗಳನ್ನು ಆಗಸ್ಟ್ 24 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸೇನೆಯ ವಿರುದ್ಧ ದಂಗೆ ಎದ್ದಿರುವ ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್-ಮುಸ್ಲಿಮಿನ್ ಬಂಡುಕೋರರು, ತಮ್ಮ ಹೋರಾಟದಲ್ಲಿ ಸೇನೆಯ ಪರ ನಿಲ್ಲಬಾರದು ಎಂದು ನಾಗರಿಕರಿಗೆ ಎಚ್ಚರಿಸಿದ್ದರು ಎನ್ನಲಾಗಿದೆ.

ದಾಳಿಗೆ ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ತಿಳಿದು ಬಂದಿದೆ. ಪಶ್ಚಿಮ ಆಫ್ರಿಕಾದ ಇತಿಹಾಸದಲ್ಲಿ ಈ ದಾಳಿಯು ಅತ್ಯಂತ ಭೀಕರವಾದದು ಎಂದು ಹೇಳಲಾಗಿದೆ.

ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್-ಮುಸ್ಲಿಮಿನ್ (ಜೆಎನ್ಐಎಂ) ಮಾಲಿ ಮೂಲದ ಅಲ್-ಖೈದಾ ಬಂಡುಕೋರರ ಅಂಗಸಂಸ್ಥೆಯಾಗಿದ್ದು, ಬುರ್ಕಿನಾ ಫಾಸೊದಲ್ಲಿ ಸಕ್ರಿಯವಾಗಿದೆ. ಅವರು ಬೈಕ್ ಗಳಲ್ಲಿ ಬಂದು, ಬಾರ್ಸಲೋಗೊದ ಹೊರವಲಯಕ್ಕೆ ನುಗ್ಗುತ್ತಿದ್ದಂತೆ ಗ್ರಾಮಸ್ಥರನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಭೀಕರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ವಿಶ್ವಸಂಸ್ಥೆಯು ಸುಮಾರು 200 ಎಂದು ಅಂದಾಜಿಸಿದ್ದರೆ, ಬಂಡುಕೋರ ಸಂಘಟನೆ JNIM ಸುಮಾರು 300 ಹೋರಾಟಗಾರರನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಫ್ರೆಂಚ್ ಸರ್ಕಾರದ ಭದ್ರತಾ ಮೂಲಗಳನ್ನು ಉಲ್ಲೇಖಿಸಿ, CNN ಸುದ್ದಿ ಸಂಸ್ಥೆಯು ದಾಳಿಯಲ್ಲಿ ಸುಮಾರು 600 ಜನರು ಗುಂಡಿಕ್ಕಿ ಕೊಲ್ಲಲ್ಪಟ್ಟರು ಎಂದು ವರದಿ ಮಾಡಿದೆ.

“ಮೊದಲ ಗುಂಡಿನ ಸದ್ದು ಕೇಳಿದಾಗ ಸುಮಾರು 11 ಗಂಟೆಯಾಗಿತ್ತು. ನಾನು ಪಟ್ಟಣದಿಂದ 4 ಕಿಲೋಮೀಟರ್ ದೂರದಲ್ಲಿ ಕಂದಕದಲ್ಲಿದ್ದೆ”, ಎಂದು ಸೈನ್ಯದಿಂದ ಕಂದಕಗಳನ್ನು ಅಗೆಯಲು ಹೇಳಲಾದ ಡಝನ್‌ಗಟ್ಟಲೆ ಜನರಲ್ಲಿ ತಾನೂ ಒಬ್ಬ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು CNN ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

" ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ನಾನು ಕಂದಕದತ್ತ ತೆವಳಲು ಪ್ರಾರಂಭಿಸಿದೆ. ದಾಳಿಕೋರರು ಕಂದಕಗಳನ್ನು ಹುಡುಕುತ್ತಿರುವಂತೆ ಕಂಡುಬಂತು. ಹಾಗಾಗಿ, ನಾನು ತೆವಳುತ್ತಾ ಕಂದಕದಿಂದ ಹೊರಬಂದೆ. ಗುಂಡಿನ ದಾಳಿಯಿಂದ ತತ್ತರಿಸಿದ ಜನರನ್ನು ಕಂಡೆ. ನನ್ನ ತೆವಳು ದಾರಿಯಲ್ಲಿ ಎಲ್ಲೆಂದರಲ್ಲಿ ರಕ್ತ ಹರಿಯುತ್ತಿತ್ತು. ಎಲ್ಲೆಲ್ಲೂ ಕಿರುಚಾಟ ಕೇಳುತ್ತಿತ್ತು. ನಾನು ಪೊದೆಯ ಕೆಳಗೆ ಸಂಜೆಯವರೆಗೂ ಸತ್ತು ಬಿದ್ದವನಂತೆ ಮಲಗಿಕೊಂಡು ಬಚಾವಾದೆ, ”ಎಂದು ಘಟನೆಯ ಭಯಾನಕತೆಯನ್ನು ಅವರು ವಿವರಿಸಿದರು.

ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡ, ದಾಳಿಯಲ್ಲಿ ಬದುಕುಳಿದ ಇನ್ನೊಬ್ಬ ವ್ಯಕ್ತಿಯು ಬಂಡುಕೋರರು ಇಡೀ ದಿನ ದಾಳಿ ನಡೆಸಿ ಜನರನ್ನು ಹತ್ಯೆ ಮಾಡಿದ್ದಾರೆ. ಹತ್ಯೆಗೀಡಾದ ಜನರ ಶವಗಳನ್ನು ಸಂಗ್ರಹಿಸಲು ನಮಗೆ ಮೂರು ದಿನಗಳೇ ಬೇಕಾಯಿತು. ಭೀಕರ ದೃಶ್ಯಗಳನ್ನು ನೋಡುತ್ತಿದ್ದಂತೆ ನಮ್ಮ ಮನಸ್ಸು ಭಾರವಾಯಿತು. ಅನೇಕ ದೇಹಗಳು ಎಲ್ಲೆಂದರಲ್ಲಿ ನೆಲದಲ್ಲಿ ಬಿದ್ದುಕೊಂಡಿದ್ದವು. ಅವುಗಳನ್ನು ಹೂಳುವುದೇ ಕಷ್ಟಕರವಾಗಿತ್ತು”, ಎಂದು ಅವರು ಹೇಳಿದ್ದಾರೆ.

ಜಾಗತಿಕ ಸಂಘರ್ಷವನ್ನು ವರದಿ ಮಾಡುವ ACLED ವಿಶ್ಲೇಷಣಾ ಗುಂಪಿನ ಪ್ರಕಾರ, ಒಸಾಮಾ ಬಿನ್ ಲಾಡೆನ್ ಸ್ಥಾಪಿಸಿದ, ಅಮೆರಿಕದಲ್ಲಿ 9/11 ದಾಳಿಯನ್ನು ನಡೆಸಿದ ಅಲ್-ಖೈದಾದೊಂದಿಗೆ ಸಂಯೋಜಿತವಾಗಿರುವ ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್-ಮುಸ್ಲಿಮಿನ್ ಮತ್ತು ಐಸಿಸ್ ಗುಂಪು ಈ ವರ್ಷ ಸುಮಾರು 3,800 ಜನರನ್ನು ಹತ್ಯೆ ಮಾಡಿದೆ ಎನ್ನಲಾಗಿದೆ.

2015 ರಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ, ಬುರ್ಕಿನಾ ಫಾಸೊದಲ್ಲಿ 20,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಜನರು ಪಲಾಯನ ಮಾಡಿದ್ದಾರೆ. ಅಸ್ಥಿರತೆಯಿಂದ ನಾಶವಾದ ಪ್ರದೇಶವಾದ ಸಹೇಲ್ ನಲ್ಲಿ ನೆಲೆಗೊಂಡಿರುವ ಬುರ್ಕಿನಾ ಫಾಸೊ ವಿಶ್ವದ ಬಡ ದೇಶಗಳಲ್ಲಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News