ಭಾರತ ವಿರೋಧಿ ಕೃತ್ಯಗಳಿಗೆ ಅವಕಾಶ ಇಲ್ಲ: ದಿಸ್ಸನಾಯಕೆ
ಹೊಸದಿಲ್ಲಿ: ಭಾರತದ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರುವಂಥ ಯಾವುದೇ ಚಟುವಟಿಕೆಗಳನ್ನು ತನ್ನ ನೆಲದಲ್ಲಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆಯವರು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಭರವಸೆ ನೀಡಿದ್ದಾರೆ.
ದಿಸ್ಸನಾಯಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ದ್ವೀಪರಾಷ್ಟ್ರಕ್ಕೆ ಮೊಟ್ಟಮೊದಲ ಭೇಟಿ ನೀಡಿದ ವಿದೇಶಿ ನಾಯಕ ಎನಿಸಿದ ಜೈಶಂಕರ್ ಜತೆಗೆ ನಡೆಸಿದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ. ಉಭಯ ದೇಶಗಳು ಆಯಾ ದೇಶದ ಭದ್ರತೆ ಮತ್ತು ರಕ್ಷಣಾ ಹಿತಾಸಕ್ತಿಗಳ ವಿಷಯದಲ್ಲಿ ಪರಸ್ಪರ ಸಹಕರಿಕೊಳ್ಳಲು ಕೂಡಾ ನಿರ್ಧರಿಸಲಾಗಿದೆ.
"ಪರಸ್ಪರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಮತ್ತು ಇಡೀ ಪ್ರದೇಶದ ಸ್ಥಿರತೆ ಮತ್ತು ಭದ್ರತೆಗೆ ಕೊಡುಗೆ ನೀಡುವ ಸಲುವಾಗಿ ನಮ್ಮ ಸಹಭಾಗಿತ್ವ ಇತ್ತು. ಪರಸ್ಪರ ವಿಶ್ವಾಸ, ಪಾರದರ್ಶಕತೆ ಮತ್ತು ಪರಸ್ಪರ ಸೂಕ್ಷ್ಮತೆಯನ್ನು ಗೌರವಿಸುವ ಹಾಗೂ ವೃದ್ಧಿಸುವ ನಿರಂತರ ಸಂವಾದಗಳು ನಡೆಯುವುದು ಮುಖ್ಯ" ಎಂದು ಭಾರತ ವಿವರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಜೈಶಂಕರ್ ಅವರು ದಿಸ್ಸನಾಯಕೆಯವರನ್ನು ಭಾರತಕ್ಕೆ ಆಹ್ವಾನಿಸಿದ್ದು, ಸಮೃದ್ಧ ಶ್ರೀಲಂಕಾವನ್ನು ನಿರ್ಮಿಸುವ ದೃಷ್ಟಿಕೋನ ಮತ್ತು ದೇಶದ ಜನತೆಯ ನಿರೀಕ್ಷೆಗಳನ್ನು ಈಡೇರಿಸಬೇಕಾದರೆ, ಭಾರತದ ಆರ್ಥಿಕ ಬೆಂಬಲ ಅಗತ್ಯ ಎಂದು ಶ್ರೀಲಂಕಾ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾಗಿ ಪ್ರಕಟಣೆ ತಿಳಿಸಿದೆ.