ಗುಟೆರಸ್ ನಿಷೇಧಿಸಿದ ಇಸ್ರೇಲ್ ಕ್ರಮಕ್ಕೆ ಭದ್ರತಾ ಮಂಡಳಿ ಟೀಕೆ | ವಿಶ್ವಸಂಸ್ಥೆ ಮುಖ್ಯಸ್ಥರ ಪರ ನಿಂತ ಅಮೆರಿಕ, ಬ್ರಿಟನ್, ಫ್ರಾನ್ಸ್

Update: 2024-10-04 16:37 GMT

ಆ್ಯಂಟೋನಿಯ್ ಗುಟೆರಸ್ | PC : PTI  

ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯ್ ಗುಟೆರಸ್ ಅವರನ್ನು ನಿಷೇಧಿಸಿರುವ ಇಸ್ರೇಲ್ ಸರಕಾರದ ಕ್ರಮವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಟೀಕಿಸಿದ್ದು ಗುಟೆರಸ್ ಅವರಿಗೆ ಬೆಂಬಲ ಸೂಚಿಸಿದೆ.

ಕಳೆದ ಮಂಗಳವಾರ ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ಸ್ಪಷ್ಟವಾಗಿ ಖಂಡಿಸುವಲ್ಲಿ ಗುಟೆರಸ್ ವಿಫಲವಾಗಿದ್ದಾರೆ. ಅವರು ಇಸ್ರೇಲ್ ವಿರುದ್ಧ ಪಕ್ಷಪಾತ ತೋರುತ್ತಿದ್ದಾರೆ ಎಂದು ಆರೋಪಿಸಿದ್ದ ಇಸ್ರೇಲ್ ವಿದೇಶಾಂಗ ಸಚಿವ ಇಸ್ರಾಯೇಲ್ ಕಾಟ್ಝ್, ಗುಟೆರಸ್ ಸ್ವಾಗತಾರ್ಹ ವ್ಯಕ್ತಿಯಲ್ಲ, ಅವರು ಇಸ್ರೇಲ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದಿದ್ದರು.

ಈ ಕ್ರಮವನ್ನು ಟೀಕಿಸಿರುವ 15 ಸದಸ್ಯರ ಭದ್ರತ ಮಂಡಳಿ `ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಜತೆ ತೊಡಗಿಸಿಕೊಳ್ಳದಿರುವ ಯಾವುದೇ ನಿರ್ಧಾರವು (ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯ ನಡುವೆ) ನಿಷ್ಪಲ ಮತ್ತು ಪರಿಣಾಮ ರಹಿತವಾಗಿದೆ' ಎಂದಿದೆ. ಗುಟೆರಸ್ ಅವರ ಕೆಲಸವನ್ನು ದುರ್ಬಲಗೊಳಿಸುವ ಕ್ರಮಗಳಿಂದ ದೂರವಿರಬೇಕು ಎಂದು 15 ಸದಸ್ಯ ದೇಶಗಳ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿರುವುದಾಗಿ ಅಮೆರಿಕ ಮೂಲದ ಸುದ್ದಿಸಂಸ್ಥೆ `ಬ್ಲೂಮ್‌ ಬರ್ಗ್‌' ವರದಿ ಮಾಡಿದೆ.

ಇಸ್ರೇಲಿನ ಹೇಳಿಕೆ ಹೊರಬಿದ್ದೊಡನೆ ಫ್ರಾನ್ಸ್ ಹಾಗೂ ಬ್ರಿಟನ್ ಹೇಳಿಕೆಯನ್ನು ಟೀಕಿಸಿ ಗುಟೆರಸ್ ರನ್ನು ಸಮರ್ಥಿಸಿಕೊಂಡಿವೆ. ಅಲ್ಲದೆ, ಇದೇ ಮೊದಲ ಬಾರಿಗೆ ಇಸ್ರೇಲಿನ ಆಪ್ತಮಿತ್ರ ಅಮೆರಿಕವೂ ವಿಶ್ವಸಂಸ್ಥೆ ಮುಖ್ಯಸ್ಥರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ , ಇಸ್ರೇಲ್ ಹಾಗೂ ವಿಶ್ವಸಂಸ್ಥೆ ನಡುವಿನ ಬಿಕ್ಕಟ್ಟೂ ಹೆಚ್ಚಿದೆ. ವಿಶ್ವಸಂಸ್ಥೆಯ ಹಲವು ಕಾರ್ಯಕರ್ತರು ಹಮಾಸ್ ಜತೆ ಸಂಬಂಧ ಹೊಂದಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ಆರೋಪಿಸಿದ್ದಾರೆ. ಜತೆಗೆ, ಗಾಝಾಕ್ಕೆ ಭೇಟಿ ನೀಡಲು ಬಯಸುವ ವಿಶ್ವಸಂಸ್ಥೆ ಅಧಿಕಾರಿಗಳಿಗೆ ಇಸ್ರೇಲ್ ವೀಸಾ ನಿರಾಕರಿಸಿದೆ.

ಗಾಝಾದಲ್ಲಿ ತಕ್ಷಣ ಕದನ ವಿರಾಮದ ಅಗತ್ಯವನ್ನು ನಿರಂತರ ಪ್ರತಿಪಾದಿಸುತ್ತಿರುವ ಗುಟೆರಸ್ ಇಸ್ರೇಲ್ ಮೇಲಿನ ಹಮಾಸ್ ದಾಳಿ ಹಾಗೂ ಇದಕ್ಕೆ ಪ್ರತಿಯಾಗಿ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಫೆಲೆಸ್ತೀನೀಯರ ಸಾಮೂಹಿಕ ಹತ್ಯೆಯನ್ನೂ ಖಂಡಿಸಿದ್ದಾರೆ. ನಾಗರಿಕರನ್ನು ರಕ್ಷಿಸುವುದು ಹಾಗೂ ಮಾನವೀಯ ನೆರವು ಸುಲಭವಾಗಿ ಗಾಝಾದ ಪ್ರದೇಶವನ್ನು ತಲುಪಲು ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News