ಆಕ್ರಮಣಕಾರರಿಂದ ರಕ್ಷಿಸಿಕೊಳ್ಳುವ ಹಕ್ಕು ಪ್ರತಿಯೊಂದು ದೇಶಕ್ಕೂ ಇದೆ: ಶುಕ್ರವಾರದ ಪ್ರಾರ್ಥನಾ ಸಂದೇಶದಲ್ಲಿ ಇರಾನ್ ನ ಸರ್ವೋಚ್ಛ ನಾಯಕ ಆಯತುಲ್ಲಾ ಖಾಮಿನೈ ಮಹತ್ವದ ಹೇಳಿಕೆ
ಇರಾನ್: ಆಕ್ರಮಣಕಾರರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಪ್ರತಿಯೊಂದು ದೇಶಕ್ಕೂ ಇದೆ ಎಂದು ಇರಾನ್ ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಶುಕ್ರವಾರದ ಪ್ರಾರ್ಥನಾ ಸಂದೇಶದಲ್ಲಿ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ, ಹಿಜ್ಬುಲ್ಲಾ ಮೇಲೆ ಇಸ್ರೇಲ್ ಆಕ್ರಮಣದ ಹಿನ್ನೆಲೆ ಇಡೀ ವಿಶ್ವವೇ ಇರಾನ್ ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಇಂದಿನ ಭಾಷಣಕ್ಕೆ ಎದರು ನೋಡುತ್ತಿತ್ತು.
ಇರಾನ್ ನ ಸರ್ವೋಚ್ಚ ನಾಯಕ ಖಾಮಿನೈ ಅವರು ತಮ್ಮ ಅಪರೂಪದ ಶುಕ್ರವಾರದ ಪ್ರಾರ್ಥನಾ ಸಂದೇಶದಲ್ಲಿ, ಮುಸ್ಲಿಂ ರಾಷ್ಟ್ರಗಳು ಅಫ್ಘಾನಿಸ್ತಾನದಿಂದ ಯೆಮನ್ ವರೆಗೆ, ಇರಾನ್ ನಿಂದ ಗಾಝಾ ಮತ್ತು ಲೆಬನಾನ್ ವರೆಗೆ ರಕ್ಷಣಾ ಪಟ್ಟಿಯನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿ ಮತ್ತು ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯು ನ್ಯಾಯಸಮ್ಮತವಾದ ಕ್ರಮವಾಗಿದೆ. ನಾವು ಇಸ್ರೇಲ್ ಗೆ ಪ್ರತಿಕ್ರಿಯಿಸಲು ವಿಳಂಬ ಅಥವಾ ಆತುರ ಮಾಡುವುದಿಲ್ಲ. ಕ್ಷಿಪಣಿ ದಾಳಿಯನ್ನುದ್ದೇಶಿಸಿ ನಮ್ಮ ಸಶಸ್ತ್ರ ಪಡೆಗಳ ಅದ್ಭುತ ಕ್ರಮವು ಸಂಪೂರ್ಣವಾಗಿ ಕಾನೂನು ಮತ್ತು ನ್ಯಾಯಸಮ್ಮತವಾಗಿತ್ತು ಎಂದು ಖಾಮಿನೈ ಹೇಳಿದ್ದಾರೆ.