ಸುಂಕ ವಿವಾದ: ಅಮೆರಿಕಕ್ಕೆ ಹಾನಿ ಮಾಡುವ ದೇಶಗಳ ಟ್ರಂಪ್ ಪಟ್ಟಿಯಲ್ಲಿ ಭಾರತ!
![ಸುಂಕ ವಿವಾದ: ಅಮೆರಿಕಕ್ಕೆ ಹಾನಿ ಮಾಡುವ ದೇಶಗಳ ಟ್ರಂಪ್ ಪಟ್ಟಿಯಲ್ಲಿ ಭಾರತ! ಸುಂಕ ವಿವಾದ: ಅಮೆರಿಕಕ್ಕೆ ಹಾನಿ ಮಾಡುವ ದೇಶಗಳ ಟ್ರಂಪ್ ಪಟ್ಟಿಯಲ್ಲಿ ಭಾರತ!](https://www.varthabharati.in/h-upload/2025/01/29/1500x900_1318701-tump.webp)
PC: facebook.com/DonaldTrump
ವಾಷಿಂಗ್ಟನ್: ಅಕ್ರಮ ವಲಸಿಗರ ಸಮಸ್ಯೆ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ತಮಗೆ ಸರಿ ಎನಿಸಿದ್ದನ್ನು ಮಾಡಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಈ ಸಂಬಂಧ ಭಾರತದ ಜತೆ ಮಾತುಕತೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಫ್ಲೋರಿಡಾದಿಂದ ಜಾಯಿಂಟ್ ಬೇಸ್ ಆ್ಯಂಡ್ರೂಸ್ಗೆ ಆಗಮಿಸುವ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರುವರಿಯಲ್ಲಿ ಮೋದಿ ಶ್ವೇತಭವನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಪ್ರಕಟಿಸಿದರು. ಅಮೆರಿಕಕ್ಕೆ ಹಾನಿ ಮಾಡುವ ದೇಶಗಳಿಂದ ಆಗುವ ಆಮದಿನ ಮೇಲೆ ಸುಂಕವನ್ನು ವಿಧಿಸುವ ತಮ್ಮ ನಿರ್ಧಾರವನ್ನು ಟ್ರಂಪ್ ಪುನರುಚ್ಚರಿಸಿದರು. ಚೀನಾ, ಭಾರತ ಮತ್ತು ಬ್ರೆಜಿಲ್ ದೇಶಗಳನ್ನು ಅತ್ಯಧಿಕ ಸುಂಕದ ದೇಶಗಳು ಎಂದು ಟ್ರಂಪ್ ಪಟ್ಟಿ ಮಾಡಿದರು.
"ನಮಗೆ ಹಾನಿ ಉಂಟುಮಾಡುತ್ತಾರೆ ಎಂದು ನಮಗೆ ಅನಿಸಿದ ಹೊರದೇಶಗಳ ಮತ್ತು ಹೊರಗಿನ ಜನರ ಮೇಲೆ ನಾವು ಸುಂಕ ವಿಧಿಸಲಿದ್ದೇವೆ. ಬೇರೆಯವರು ಏನು ಮಾಡುತ್ತಾರೆ ನೋಡೋಣ. ಚೀನಾ ದೊಡ್ಡ ಸುಂಕ ಹೇರಿದರೆ, ಭಾರತ ಹಾಗೂ ಬ್ರೆಜಿಲ್ ಮತ್ತಿತರ ದೇಶಗಳೂ ಈ ಪಟ್ಟಿಯಲ್ಲಿವೆ. ಆದರೆ ಅಮೆರಿಕ ಮೊದಲು ಎಂಬ ನಮ್ಮ ನೀತಿಯಡಿ ನಾವು ಮುಂದೆ ಹಾಗಾಗಲು ಅವಕಾಶ ನೀಡುವುದಿಲ್ಲ" ಎಂದು ಹೇಳಿದರು.
ಟ್ರಂಪ್ ಹಾಗೂ ಮೋದಿಯವರು ನಡೆಸಿದ ದೂರವಾಣಿ ಸಂಭಾಷಣೆ ವೇಳೆ ಟ್ರಂಪ್, ಅಮೆರಿಕ ನಿರ್ಮಿತ ಭದ್ರತಾ ಸಾಧನಗಳನ್ನು ಭಾರತ ಖರೀದಿಸಬೇಕು ಎಂದು ಒತ್ತಾಯಿಸಿದ್ದು, ನ್ಯಾಯಸಮ್ಮತ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದರು ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.