ನಿಜ್ಜರ್ ಹತ್ಯೆಯಲ್ಲಿ ಅಮಿತ್ ಶಾ ಕೈವಾಡದ ಬಗ್ಗೆ ಪತ್ರಿಕೆಗೆ ನಾನೇ ಮಾಹಿತಿ ನೀಡಿದ್ದೆ : ವಾಷಿಂಗ್ಟನ್ ಪೋಸ್ಟ್ ವರದಿ ಬಗ್ಗೆ ಕೆನಡಾ ಸಚಿವ ಪ್ರತಿಕ್ರಿಯೆ
ಹೊಸದಿಲ್ಲಿ : ಕೆನಡಾ ನೆಲದಲ್ಲಿನ ಹತ್ಯೆ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿರುವುದನ್ನು ತಾನೇ ಖಚಿತಪಡಿಸಿ ವಾಷಿಂಗ್ಟನ್ ಪೋಸ್ಟ್ ಗೆ ಹೇಳಿಕೆ ನೀಡಿದ್ದಾಗಿ ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಹೇಳಿದ್ದಾರೆ.
ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ಕೆನಡಾದ ಸಂಸದೀಯ ಸಮಿತಿಯ ವಿಚಾರಣೆ ವೇಳೆ ಡೇವಿಡ್ ಮಾರಿಸನ್ ಹೀಗೆ ಹೇಳಿರುವುದಾಗಿ ವರದಿಯಾಗಿದೆ.
ಭಾರತದ ಏಜಂಟರು ಕೆನಡಾದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ಧಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಅಕ್ಟೋಬರ್ 14ರಂದು ಆರೋಪಿಸಿದ್ದರು.
ಅದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಟ್ರುಡೊ, ಭಾರತದ ವಿರುದ್ದ ಸರಣಿ ಆರೋಪಗಳನ್ನು ಮಾಡಿದ್ದರು. ಭಾರತ ತನ್ನ ರಾಜತಾಂತ್ರಿಕರನ್ನು ಬಳಸಿಕೊಂಡು ಸಂಘಟಿತ ಅಪರಾಧಗಳ ಮೂಲಕ ಕೆನಡಾ ಪ್ರಜೆಗಳ ಮೇಲೆ ದಾಳಿ ಮಾಡುತ್ತಿದೆ. ಹಿಂಸಾಚಾರ ಮತ್ತು ಹತ್ಯೆಗಳ ಮೂಲಕ ಇಲ್ಲಿನ ಜನರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿದೆ ಎಂದಿದ್ದರು.
ಅಮಿತ್ ಶಾ ಮತ್ತು ಭಾರತದ ವಿದೇಶಿ ಗುಪ್ತಚರ ಸಂಸ್ಥೆ RAW ದ ಹಿರಿಯ ಅಧಿಕಾರಿಗಳು ನಿಜ್ಜರ್ ಹತ್ಯೆಗೆ ಅನುಮತಿ ನೀಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಈ ಹಿಂದೆ ವರದಿ ಮಾಡಿತ್ತು.
ಅದಕ್ಕಿಂತ ಮುಂಚಿನ ವರದಿಯಲ್ಲಿ ವಾಷಿಂಗ್ಟನ್ ಪೋಸ್ಟ್ ಅಮಿತ್ ಶಾ ಹೆಸರನ್ನು ಉಲ್ಲೇಖಿಸಿರಲಿಲ್ಲ. ಭಾರತದ ಹಿರಿಯ ಸಚಿವರು ಮತ್ತು RAW ದ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮಾತ್ರ ಹೇಳಲಾಗಿತ್ತು.
ಆದರೆ ನಂತರ ಪರಿಷ್ಕರಿಸಿದ ವರದಿಯಲ್ಲಿ ಪತ್ರಿಕೆ ತನ್ನ ಮೂಲಗಳಿಂದ ಲಭ್ಯವಾದ ಹೆಚ್ಚು ವಿವರವಾದ ಮಾಹಿತಿ ಆಧಾರದ ಮೇಲೆ ಅಮಿತ್ ಶಾ ಹೆಸರನ್ನು ನೇರವಾಗಿ ಉಲ್ಲೇಖಿಸಿತ್ತು. ಈ ಬಗ್ಗೆ ಕೆನಡಾದ ಸಂಸದೀಯ ಸಮಿತಿಯ ವಿಚಾರಣೆಯಲ್ಲಿ ಪ್ರಶ್ನೆಗಳನ್ನು ಕೇಳಲಾಯಿತು. ವಿಚಾರಣೆಯಲ್ಲಿ ಸಂಸತ್ತಿನ ಸದಸ್ಯರ ಮುಂದೆ ಇತರ ಹಿರಿಯ ಅಧಿಕಾರಿಗಳ ಜೊತೆ ಡೇವಿಡ್ ಮಾರಿಸನ್ ಅವರೂ ಸಾಕ್ಯ್ಯ ನುಡಿದರು.
ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ಮೇಲೆ ನಡೆದ ವ್ಯಾಪಕ ಅಪರಾಧಗಳಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಎರಡು ವಾರಗಳ ಹಿಂದೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಆರೋಪಿಸಿದ್ದರ ಬಗ್ಗೆ ಸಮಿತಿಯಲ್ಲಿರುವ ಸಂಸದರು ಪ್ರಶ್ನೆಗಳನ್ನು ಕೇಳಿದರು.
ಪತ್ರಕರ್ತರು ನನ್ನ ಬಳಿ ಅದೇ ವ್ಯಕ್ತಿಯಾ ಎಂದು ಕೇಳಿದ್ದರು. ಅದೇ ವ್ಯಕ್ತಿ ಎಂದು ನಾನು ದೃಢಪಡಿಸಿದ್ದೆ ಎಂದು ಸಮಿತಿಯೆದುರು ಡೇವಿಡ್ ಮಾರಿಸನ್ ಹೇಳಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ವಾಷಿಂಗ್ಟನ್ ಪೋಸ್ಟ್ ಜೊತೆಗೆ ಮಾಹಿತಿ ಹಂಚಿಕೊಂಡಿರುವ ಕೆನಡಾದ ನಿರ್ಧಾರದ ಬಗ್ಗೆ ಪ್ರಶ್ನೆ ಎದ್ದಿತು.
ಭಾರತೀಯ ಗೃಹ ವ್ಯವಹಾರಗಳ ಸಚಿವ ಕೆನಡಾ ನೆಲದಲ್ಲಿನ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಮಾಹಿತಿಯನ್ನು ಕೆನಡಾದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಆದರೂ ಅದು ವಾಷಿಂಗ್ಟನ್ ಪೋಸ್ಟ್ ನಲ್ಲಿ ಮಾತ್ರ ಹೇಗೆ ಬಹಿರಂಗಗೊಂಡಿತು ಎಂದು ಕೇಳಲಾಯಿತು. ಆ ಪ್ರಶ್ನೆಗೆ ಉತ್ತರಿಸಿದ ಮಾರಿಸನ್, ತಾನೇ ಹೇಳಿಕೆ ನೀಡಿದ್ದಾಗಿ ಸ್ಪಷ್ಟಪಡಿಸಿದರು.
ಭಾರತ ಸರ್ಕಾರದ ಏಜೆಂಟ್ರ ಮೂಲಕ ಕೆನಡಾದಲ್ಲಿ ಚುನಾವಣಾ ಹಸ್ತಕ್ಷೇಪ ಮತ್ತು ಕ್ರಿಮಿನಲ್ ಚಟುವಟಿಕೆಗಳು ನಡೆದಿರುವ ಬಗ್ಗೆಯೂ ಸಮಿತಿ ಸದಸ್ಯರು ಪ್ರಶ್ನೆಗಳನ್ನು ಕೇಳಿದರು. ಸಿಖ್ ಸಮುದಾಯದ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಟ್ರುಡೊ ಅವರ ರಾಜಕೀಯ ಅಜೆಂಡಾ ಇದಾಗಿದೆ ಎಂದು ಈಗಾಗಲೇ ಪ್ರತಿಪಾದಿಸಿರುವ ಭಾರತ, ಟ್ರುಡೋ ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದು ಹೇಳಿದೆ.
ಡೇವಿಡ್ ಮಾರಿಸನ್ ಆರೋಪಕ್ಕೆ ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ.
ಸೌಜನ್ಯ : thewire.in