ಜಪಾನ್ ಭೂಕಂಪದ ಬಗ್ಗೆ ಅಪಹಾಸ್ಯ; ಚೀನಾದ ಟಿವಿ ನಿರೂಪಕ ಅಮಾನತು
ಬೀಜಿಂಗ್: ಜನವರಿ 1ರಂದು ಜಪಾನ್ ನಲ್ಲಿ ಸಂಭವಿಸಿದ ಮಾರಣಾಂತಿಕ ಭೂಕಂಪನದ ಬಗ್ಗೆ ಅಪಹಾಸ್ಯ ಮಾಡಿದ ಚೀನಾದ ಟಿವಿ ಶೋ ನಿರೂಪಕನನ್ನು ಅಮಾನತು ಮಾಡಿರುವುದಾಗಿ ವರದಿಯಾಗಿದೆ.
ಪ್ರಾದೇಶಿಕ ಟಿವಿ ಚಾನೆಲ್ `ಹೆನಾನ್ ಬ್ರಾಡ್ಕಾಸ್ಟಿಂಗ್'ನಲ್ಲಿ ` ವಿಧಿಲಿಖಿತ 7.4 ತೀವ್ರತೆಯ ಭೂಕಂಪ ಜಪಾನ್ ಗೆ ಅಪ್ಪಳಿಸಿದೆ' ಎಂಬ ಶೀರ್ಷಿಕೆಯ ಕಾರ್ಯಕ್ರಮ ಪ್ರಸಾರವಾಗಿತ್ತು. ಕಾರ್ಯಕ್ರಮ ನಿರೂಪಿಸಿದ ಕ್ಸಿಯಾವೊ ಚೆಂಘಾವೊ `ಹೊಸ ವರ್ಷದ ಆರಂಭದ ದಿನವೇ ಈ ರೀತಿಯ ಪ್ರಬಲ ಭೂಕಂಪ ಜಪಾನ್ ಗೆ ಅಪ್ಪಳಿಸಿರುವುದು ನನಗಂತೂ ಅಚ್ಚರಿ ತಂದಿದೆ. ಈ ವರ್ಷವಿಡೀ ಜಪಾನ್ ಗೆ ಇಂತಹ ಇನ್ನಷ್ಟು ಕಾರ್ಮೋಡಗಳು ಆವರಿಸಬಹುದು. ಪರಮಾಣು ಸ್ಥಾವರದ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವಂತಹ ಕೆಲವೊಂದು ಕಾರ್ಯಗಳನ್ನು ಅವರು ಕಡಿಮೆ ಮಾಡಿದರೆ ಒಳಿತು' ಎಂದು ವಿವರಣೆ ನೀಡಿದ್ದರು.
ಅನುಚಿತ ಪ್ರತಿಕ್ರಿಯೆಗಾಗಿ ಕ್ಸಿಯಾವೊ ಚೆಂಘಾವೊರನ್ನು ಅಮಾನತುಗೊಳಿಸಲಾಗಿದೆ. ಆದರೆ ಅವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿಲ್ಲ ಎಂದು ಟಿವಿ ವಾಹಿನಿ ಹೇಳಿಕೆ ನೀಡಿದೆ. ಟಿವಿ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗುತ್ತಿರುವಂತೆಯೇ, ಈ ಹೇಳಿಕೆಗೆ ಚೀನಾ ಸರಕಾರ ವಿಷಾದ ಸೂಚಿಸುತ್ತದೆ ಎಂದು ಚೀನಾದ ಪ್ರೀಮಿಯರ್ ಲಿ ಕ್ವಿಯಾಂಗ್ ಪ್ರತಿಕ್ರಿಯಿಸಿದ್ದಾರೆ. ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಕ್ವಿಯಾಂಗ್ ` ಭೂಕಂಪದ ಪರಿಹಾರ ಕಾರ್ಯಾಚರಣೆಯಲ್ಲಿ ಜಪಾನ್ ಗೆ ಅಗತ್ಯದ ನೆರವು ಒದಗಿಸಲು ಚೀನಾ ಸಿದ್ಧವಾಗಿದೆ' ಎಂದು ಭರವಸೆ ನೀಡಿರುವುದಾಗಿ `ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿದೆ.