ರಫಾ ಆಕ್ರಮಣದ ಕುರಿತು ಕಳವಳ | ಇಸ್ರೇಲ್ ಗೆ ಬಾಂಬ್ ಸಾಗಣೆಯನ್ನು ತಡೆ ಹಿಡಿದ ಅಮೆರಿಕ

Update: 2024-05-08 06:14 GMT

PC : PTI

ವಾಷಿಂಗ್ಟನ್: ತನ್ನ ಇಚ್ಛೆಗೆ ವಿರುದ್ಧವಾಗಿ ದಕ್ಷಿಣ ಗಾಝಾ ನಗರವಾದ ರಫಾ ಮೇಲೆ ಪೂರ್ಣಪ್ರಮಾಣದ ಆಕ್ರಮಣ ನಡೆಸಲು ಇಸ್ರೇಲ್ ನಿರ್ಧರಿಸಿರುವುದರ ವಿರುದ್ಧ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಇಸ್ರೇಲ್ ಗೆ ಸಾಗಣೆ ಮಾಡಬೇಕಿದ್ದ ಬಾಂಬ್ ಅನ್ನು ಕಳೆದ ವಾರ ತಡೆ ಹಿಡಿದಿದೆ ಎಂದು ಮಂಗಳವಾರ ಅಮೆರಿಕಾದ ಹಿರಿಯ ಆಡಳಿತಾತ್ಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1,800 2,000 ಪೌಂಡ್ ಬಾಂಬ್ ಗಳು ಹಾಗೂ 1,800 500 ಪೌಂಡ್ ಬಾಂಬ್ ಗಳ ಸಾಗಣೆಯಾಗಬೇಕಿತ್ತು. ಆದರೆ, ಭಾರಿ ಪ್ರಮಾಣದ ಸ್ಫೋಟಕಗಳು ಹಾಗೂ ಅವುಗಳನ್ನು ಜನನಿಬಿಡ ನಗರ ಪ್ರದೇಶದಲ್ಲಿ ಹೇಗೆ ಬಳಸಬಹುದು ಎಂಬ ಬಗ್ಗೆ ಅಮೆರಿಕ ಕಳವಳಗೊಂಡಿದೆ ಎಂದು ಈ ಸೂಕ್ಷ್ಮ ವಿಷಯದ ಕುರಿತು ಚರ್ಚಿಸಿರುವ ಹೆಸರೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರಗಾಮಿಗಳ ಗುಂಪು ಭೀಕರ ದಾಳಿ ನಡೆಸಿದ ನಂತರ, ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಿಸಿರುವುದರಿಂದ ಗಾಝಾದ ಇನ್ನಿತರ ಭಾಗಗಳಿಂದ 10 ಲಕ್ಷಕ್ಕೂ ಹೆಚ್ಚು ಮಂದಿಗೆ ಆಶ್ರಯ ಒದಗಿಸಲು ರಫಾ ನಗರಕ್ಕೆ ಸ್ಥಳಾಂತರಿಸಲಾಗಿದೆ.

ಹಲವಾರು ತಿಂಗಳಿನಿಂದ ಶ್ವೇತ ಭವನದ ವಿರೋಧವಿದ್ದರೂ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರಕಾರವು ರಫಾ ಮೇಲೆ ಆಕ್ರಮಣ ನಡೆಸುವ ಸನಿಹದಲ್ಲಿರುವುದರಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತವು ಇಸ್ರೇಲ್ ಗೆ ಭವಿಷ್ಯದಲ್ಲಿ ಒದಗಿಸುವ ಸೇನಾ ನೆರವಿನ ಕುರಿತು ಎಪ್ರಿಲ್ ತಿಂಗಳಲ್ಲಿ ಪರಾಮರ್ಶೆ ನಡೆಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News