ಸಾಕ್ಷ್ಯಚಿತ್ರದ ಬಗ್ಗೆ ವಿವಾದ ; ಟರ್ಕಿಯ ಚಲನಚಿತ್ರೋತ್ಸವ ರದ್ದು
ಅಂಕಾರ : ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವಿವಾದದಿಂದಾಗಿ ಟರ್ಕಿಯಲ್ಲಿ ಆಯೋಜಿಸಲಾಗಿದ್ದ ‘ಗೋಲ್ಡನ್ ಆರೆಂಜ್’ ಚಲನಚಿತ್ರೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಟರ್ಕಿಯಲ್ಲಿ 2016ರಲ್ಲಿ ನಡೆದ ದಂಗೆಯ ಪ್ರಯತ್ನದ ಬಳಿಕದ ರಾಜಕೀಯ ಸೂಕ್ಷ್ಮತೆಯ ಕುರಿತ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಸಂಬಂಧಿಸಿದ ವಿವಾದ ಇದಕ್ಕೆ ಕಾರಣವಾಗಿದೆ. 2016ರ ಜುಲೈ 15ರಂದು ಟರ್ಕಿಯಲ್ಲಿ ನಡೆದ ದಂಗೆಯ ಪ್ರಯತ್ನದ ಬಳಿಕ ತಮ್ಮ ಕೆಲಸದಿಂದ ವಜಾಗೊಂಡ ಶಿಕ್ಷಕ ಮತ್ತು ವೈದ್ಯರ ಕಷ್ಟಗಳ ಮೇಲೆ ಕೇಂದ್ರೀಕರಿಸುವ ‘ಕಾನೂನ್ ಹುಕುಮ್’ ಎಂಬ ಸಾಕ್ಷ್ಯಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಟರ್ಕಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಚಲನಚಿತ್ರೋತ್ಸವಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ.
ಇಂತಹ ಮಹತ್ವದ ಉತ್ಸವದಲ್ಲಿ ಕಲೆಯ ಶಕ್ತಿಯನ್ನು ಸಂತ್ರಸ್ತರ ಗ್ರಹಿಕೆಯ ಮೂಲಕ ‘ಫೆಟೊ’ ಭಯೋತ್ಪಾದಕ ಸಂಘಟನೆಯ ಪ್ರಚಾರ ಕಾರ್ಯಕ್ಕೆ ಬಳಸಿರುವುದು ಅತ್ಯಂತ ದುಃಖದ ವಿಷಯವಾಗಿದೆ’ ಎಂದು ಇಲಾಖೆ ಹೇಳಿಕೆ ನೀಡಿದೆ.