ಕ್ಯೂಬಾ: ಕೋಳಿ ಮಾಂಸ ಕಳವು, 30 ಜನರ ವಿರುದ್ಧ ಪ್ರಕರಣ ದಾಖಲು

Update: 2024-02-11 17:15 GMT

ಸಾಂದರ್ಭಿಕ ಚಿತ್ರ

ಹವಾನಾ, ಫೆ.11: ತೀವ್ರ ಆಹಾರದ ಕೊರತೆ ಎದುರಿಸುತ್ತಿರುವ ಕ್ಯೂಬಾದಲ್ಲಿ 133 ಟನ್ ಕೋಳಿ ಮಾಂಸ ಕದ್ದು ಅದನ್ನು ಬೀದಿಬದಿ ಮಾರಾಟ ಮಾಡಿದ 30 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಮ್ಯುನಿಸ್ಟ್ ಆಡಳಿತದ ಕ್ಯೂಬಾದಲ್ಲಿ ಆಹಾರದ ಬಿಕ್ಕಟ್ಟು ತೀವ್ರವಾಗಿದ್ದು ಇತರ ಆಹಾರ ವಸ್ತುಗಳ ಜತೆಗೆ ಕೋಳಿ ಮಾಂಸವನ್ನೂ ಪಡಿತರ ವ್ಯವಸ್ಥೆಯ ಮೂಲಕ ಜನರಿಗೆ ವಿತರಿಸಲಾಗುತ್ತಿದೆ. ರಾಜಧಾನಿ ಹವಾನಾದಲ್ಲಿರುವ ಸರಕಾರಿ ಗೋದಾಮಿಗೆ ನುಗ್ಗಿದ ಕೆಲವರು 1,600 ಪೆಟ್ಟಿಗೆಗಳಲ್ಲಿ ಇರಿಸಲಾಗಿದ್ದ ಕೋಳಿ ಮಾಂಸವನ್ನು ಕದ್ದೊಯ್ದಿದ್ದಾರೆ. 1959ರಲ್ಲಿ ಫಿಡೆಲ್ ಕ್ಯಾಸ್ಟ್ರೋ ಆಡಳಿತಾವಧಿಯಿಂದ ಕ್ಯೂಬಾದಲ್ಲಿ ಆಹಾರ ಪದಾರ್ಥಗಳನ್ನು ಸಬ್ಸಿಡಿ ದರದಲ್ಲಿ ಎಲ್ಲರಿಗೂ ಸಮಾನವಾಗಿ ವಿತರಿಸುವ ವ್ಯವಸ್ಥೆ ಜಾರಿಯಲ್ಲಿದೆ.

ಈಗಿನ ಪಡಿತರ ವಿತರಣೆ ಪ್ರಮಾಣದ ಪ್ರಕಾರ, ಕಳವಾದ ಕೋಳಿಮಾಂಸವು ಮಧ್ಯಮ ಪ್ರಮಾಣದ ಪ್ರಾಂತಕ್ಕೆ 1 ತಿಂಗಳ ಪಡಿತರ ವಿತರಣೆಗೆ ಸಾಕಾಗುತ್ತದೆ. ದೇಶಕ್ಕೆ ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಆಹಾರ, ಇಂಧನ ಮತ್ತು ಔಷಧಗಳ ಕೊರತೆ ಎದುರಾಗಿರುವುದರಿಂದ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಕೋಳಿ ಮಾಂಸದ ಪ್ರಮಾಣವೂ ಕಡಿಮೆಯಾಗಿದೆ ಎಂದು ಸರಕಾರದ ಪಡಿತರ ವ್ಯವಸ್ಥೆಯ ನಿರ್ದೇಶಕ ರಿಗೊಬೆರ್ಟೋ ಮುಸ್ಟೆಲಿಯರ್ ಹೇಳಿದ್ದಾರೆ.

ಸರಕಾರಿ ಗೋದಾಮಿನಿಂದ ಮಧ್ಯರಾತ್ರಿ ಕೋಳಿಮಾಂಸ ಕದ್ದು ಲಾರಿಗೆ ಲೋಡ್ ಮಾಡುತ್ತಿರುವುದು ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಪ್ರಕರಣ ದಾಖಲಾಗಿರುವವರಲ್ಲಿ ಗೋದಾಮಿನ ಅಧಿಕಾರಿಗಳು, ರಾತ್ರಿ ಪಾಳಿಯ ಸಿಬಂದಿಗಳು, ಭದ್ರತಾ ಸಿಬಂದಿ ಹಾಗೂ ಕೆಲವು ಹೊರಗಿನ ವ್ಯಕ್ತಿಗಳು ಸೇರಿದ್ದಾರೆ. ಇವರ ಮೇಲಿನ ಆರೋಪ ಸಾಬೀತಾದರೆ ಸುಮಾರು 20 ವರ್ಷಗಳ ವರೆಗೆ ಜೈಲುಶಿಕ್ಷೆ ಆಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News