ಬಾಂಗ್ಲಾದೇಶದಲ್ಲಿ ಕರ್ಫ್ಯೂ ಮುಂದುವರಿಕೆ: ಮೃತರ ಸಂಖ್ಯೆ 174ಕ್ಕೆ ಏರಿಕೆ

Update: 2024-07-23 15:18 GMT

PC : PTI 

ಢಾಕಾ: ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿಯನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು 48 ಗಂಟೆ ಸ್ಥಗಿತಗೊಳಿಸುವುದಾಗಿ ವಿದ್ಯಾರ್ಥಿಗಳು ಸೋಮವಾರ ಘೋಷಿಸಿದ್ದರೂ ಮಂಗಳವಾರವೂ ದೇಶದಾದ್ಯಂತ ಕರ್ಫ್ಯೂ ಮುಂದುವರಿದಿದೆ. ಇಂಟರ್‌ನೆಟ್ ಮತ್ತು ಟೆಲಿಫೋನ್ ಸೇವೆಗಳನ್ನು ಮರುಸ್ಥಾಪಿಸಿಲ್ಲ ಎಂದು ಎಎಫ್‌ಪಿ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಈ ಮಧ್ಯೆ, ವಿದ್ಯಾರ್ಥಿಗಳ ಪ್ರತಿಭಟನೆ, ಪೊಲೀಸರ ಲಾಠಿಚಾರ್ಜ್, ಗೋಲೀಬಾರ್ ಮತ್ತು ಮೀಸಲಾತಿ ಪರ-ವಿರೋಧ ವಿದ್ಯಾರ್ಥಿಗಳ ಗುಂಪಿನ ನಡುವಿನ ಘರ್ಷಣೆಯಲ್ಲಿ ಮೃತಪಟ್ಟವರ ಸಂಖ್ಯೆ 174ಕ್ಕೆ ಏರಿದೆ. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಹಿಂಸಾಚಾರ, ಘರ್ಷಣೆಗೆ ಸಂಬಂಧಿಸಿ 2,580 ಮಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಇಂಟರ್‌ನೆಟ್ ಮತ್ತು ಟೆಲಿಫೋನ್ ಸೇವೆ ಸ್ಥಗಿತಗೊಂಡಿರುವುದರಿಂದ ಮಾಹಿತಿ ಪ್ರಸಾರಕ್ಕೆ ಅಡ್ಡಿಯಾಗಿದೆ. ಸಾವು-ನೋವಿನ ಪ್ರಮಾಣ ಇನ್ನಷ್ಟು ಏರುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮಂಗಳವಾರ ರಾಜಧಾನಿ ಢಾಕಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೆ ಭದ್ರತಾ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕರ್ಫ್ಯೂ ಸೇರಿದಂತೆ ನಿರ್ಬಂಧ ಕ್ರಮಗಳು ಮುಂದುವರಿಯಲಿವೆ ಎಂದು ಸೇನಾಪಡೆಯ ಮುಖ್ಯಸ್ಥರು ಹೇಳಿದ್ದಾರೆ. ರಾಜಧಾನಿಯ ಪರಿಸ್ಥಿತಿಯನ್ನು ಹೆಲಿಕಾಪ್ಟರ್ ಮೂಲಕ ಪರಿಶೀಲಿಸಿದ ಬಳಿಕ ಅವರು ಮಾಧ್ಯಮದವರ ಜತೆ ಮಾತನಾಡುತ್ತಿದ್ದರು. ಮಂಗಳವಾರ ಢಾಕಾದಲ್ಲಿ ಹೆಚ್ಚಿನ ಸಂಖ್ಯೆಯ ಸೇನಾ ಉಪಸ್ಥಿತಿಯಿತ್ತು. ಕೆಲವು ರಸ್ತೆಗಳಲ್ಲಿ ಬಂಕರ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ರಸ್ತೆಗೆ ಮುಳ್ಳುತಂತಿಯ ಬೇಲಿ ನಿರ್ಮಿಸಿ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದರೆ ಮಂಗಳವಾರ ರಿಕ್ಷಾ ಸಂಚಾರ ಆರಂಭವಾಗಿದೆ ಮತ್ತು ಜನರು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ ಎಂದು ಎಎಫ್‌ಪಿ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News