ಗಾಝಾ ಕದನವಿರಾಮ ಕುರಿತು ಅಮೆರಿಕ ಮತ್ತು ಅರಬ್ ದೇಶಗಳ ನಡುವೆ ಭಿನ್ನಾಭಿಪ್ರಾಯ

Update: 2023-11-05 11:42 GMT

Photo- PTI

ಹೊಸದಿಲ್ಲಿ: ಇಸ್ರೇಲಿ ಸೇನೆ ಮತ್ತು ಹಮಾಸ್ ನಡುವೆ ಕದನ ಮುಂದುವರಿದಿದ್ದು, ಶನಿವಾರ ರಾತ್ರಿ ಮಧ್ಯ ಗಾಝಾದಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿಯಲ್ಲಿ 30ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಶನಿವಾರ ಐದನೇ ವಾರವನ್ನು ಪ್ರವೇಶಿಸಿದ್ದು, ಶಮನಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮಧ್ಯಪ್ರಾಚ್ಯದಲ್ಲಿ ರಾಜತಾಂತ್ರಿಕ ಪ್ರವಾಸವನ್ನು ಕೈಗೊಂಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಅರಬ್ ನಾಯಕರೊಂದಿಗಿನ ಸಭೆಗಳಲ್ಲಿ ಕ್ರೋಧದ ಅಲೆಗಳನ್ನು ಎದುರಿಸುತ್ತಿದ್ದಾರೆ.

ನಾಗರಿಕರ ಸಾವುಗಳನ್ನು ತಡೆಯಲು ಗಾಝಾದಲ್ಲಿ ಮಾನವೀಯ ಕದನವಿರಾಮವನ್ನು ಅಮೆರಿಕವು ಬೆಂಬಲಿಸುತ್ತದೆ ಎಂದು ಬ್ಲಿಂಕೆನ್ ಒತ್ತಿ ಹೇಳಿದ್ದಾರೆ, ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕದನ ವಿರಾಮದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಮಾನವೀಯ ಕದನವಿರಾಮವನ್ನು ಘೋಷಿಸುವಲ್ಲಿ ಪ್ರಗತಿಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇತ್ತೀಚಿಗೆ ಜೋರ್ಡಾನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು, ಆದರೆ ಆ ಬಗ್ಗೆ ವಿವರಿಸಿರಲಿಲ್ಲ.

ಗಾಯಾಳು ಫೆಲೆಸ್ತೀನಿಗಳು ಗಾಝಾ ಪಟ್ಟಿಯಿಂದ ತಪ್ಪಿಸಿಕೊಂಡು ಚಿಕಿತ್ಸೆಗಾಗಿ ರಫಾ ಗಡಿಯ ಮೂಲಕ ಈಜಿಪ್ಟ್ ತಲುಪಲು ಇಸ್ರೇಲಿ ಪಡೆಗಳು ಅವಕಾಶ ನೀಡುವವರೆಗೆ ಗಾಝಾದಿಂದ ವಿದೇಶಿಯರನ್ನು ತೆರವುಗೊಳಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಹಮಾಸ್ ಶನಿವಾರ ರಾತ್ರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇಸ್ರೇಲಿ ವಾಯುದಾಳಿಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 9,480ಕ್ಕೂ ಅಧಿಕ ಗಾಝಾ ನಿವಾಸಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್ ಅಧೀನದ ಗಾಝಾ ಆರೋಗ್ಯ ಸಚಿವಾಲಯವು ಹೇಳಿದೆ. ಸಾವಿರಾರು ಜನರು ಆಶ್ರಯ ಪಡೆದಿರುವ ವಿಶ್ವಸಂಸ್ಥೆ ಶಾಲೆಯ ಮೇಲೆ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 12 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್ ತಿಳಿಸಿದೆ. ಶುಕ್ರವಾರ ಗಾಝಾದಲ್ಲಿ ಆ್ಯಂಬುಲೆನ್ಸ್‌ಗಳ ಸಾಲಿನ ಮೇಲೆ ಇಸ್ರೇಲಿ ದಾಳಿಯು ತನ್ನನ್ನು ಗಾಬರಿಗೊಳಿಸಿದೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಹೇಳಿದ್ದಾರೆ.

ಗಾಝಾದ ಮೇಲೆ ತೀವ್ರಗೊಂಡಿರುವ ಬಾಂಬ್ ದಾಳಿಗಳು ಮತ್ತು ನಾಗರಿಕರ ಸಾವುಗಳು ವಿಶ್ವಾದ್ಯಂತ ಇಸ್ರೇಲ್ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿವೆ. ಇದು ಇಸ್ರೇಲ್‌ನ ರಾಜತಾಂತ್ರಿಕ ಸಂಬಂಧಗಳ ಮೇಲೂ ಪರಿಣಾಮವನ್ನು ಬೀರಿದೆ. ಇಸ್ರೇಲ್‌ನಿಂದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಟರ್ಕಿ ಶನಿವಾರ ಹೇಳಿದ್ದರೆ, ಜೋರ್ಡಾನ್ ತನ್ನ ರಾಯಭಾರಿಯನ್ನು ಬುಧವಾರವೇ ವಾಪಸ್ ಕರೆಸಿಕೊಂಡಿದೆ.

ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಫ್ ಎರ್ದೊಗಾನ್ ಅವರು ಗಾಝಾದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಾವುಗಳಿಗೆ ನೆತನ್ಯಾಹು ಅವರನ್ನು ವೈಯಕ್ತಿಕವಾಗಿ ಹೊಣೆಯಾಗಿಸಿದ್ದಾರೆ. ʼನೆತಾನ್ಯಹು ನಾವು ಮಾತುಕತೆ ನಡೆಸಬಹುದಾದ ವ್ಯಕ್ತಿಯಾಗಿ ಉಳಿದಿಲ್ಲ. ಅವರನ್ನು ನಾವು ಕೈಬಿಟ್ಟಿದ್ದೇವೆ’ ಎಂದು ಎರ್ದೊಗಾನ್ ಹೇಳಿದ್ದಾರೆ.

ಇಸ್ರೇಲಿ ಸೇನಾ ಮುಖ್ಯಸ್ಥ ಹೆರ್ಝಿ ಹಲೆವಿ ಅವರು ಗಾಝಾ ನಗರವನ್ನು ಸಂಪೂರ್ಣವಾಗಿ ಸುತ್ತುವರಿದಿರುವ ತಮ್ಮ ಪಡೆಗಳನ್ನು ಭೇಟಿಯಾಗಿದ್ದಾರೆ. ತಮ್ಮ ಪಡೆಗಳು ಕಠಿಣ ಹೋರಾಟವನ್ನು ನಡೆಸುತ್ತಿವೆ ಮತ್ತು ಗಾಝಾ ನಗರದ ದಕ್ಷಿಣ ಮತ್ತು ಉತ್ತರ ಭಾಗದಿಂದ ಕಾರ್ಯಾಚರಿಸುತ್ತಿವೆ,ಅವು ಜನನಿಬಿಡ ಪ್ರದೇಶಗಳನ್ನು ಪ್ರವೇಶಿಸಿವೆ ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ.

ಗಾಝಾ ನಗರವನ್ನು ಹಮಾಸ್ ಸಂಘಟನೆಯ ಕೇಂದ್ರ ಎಂದು ಇಸ್ರೇಲ್ ಬಣ್ಣಿಸಿದೆ. ಆದರೆ, ನೆರವಿಗಾಗಿ ಅಮೆರಿಕದ ವಿಶೇಷ ರಾಯಭಾರಿ ಡೇವಿಡ್ ಸ್ಯಾಟರ್‌ಫೀಲ್ಡ್ ತಿಳಿಸಿರುವಂತೆ 3.5 ಲಕ್ಷ -4 ಲಕ್ಷ ನಾಗರಿಕರು ಈಗಲೂ ಗಾಝಾದಲ್ಲಿ ಉಳಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News