ಇಸ್ರೇಲ್ ಆಕ್ರಮಣ ತಡೆಯಲು ವಿಫಲ : ಅಂತಾರಾಷ್ಟ್ರೀಯ ಸಮುದಾಯವನ್ನು ತರಾಟೆಗೆ ತೆಗೆದುಕೊಂಡ ಸೌದಿ ಯುವರಾಜ ಸಲ್ಮಾನ್

Update: 2023-11-11 17:02 GMT

ಸೌದಿ ಅರೇಬಿಯಾ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ Photo: twitter/HRHMBNSALMAAN

ರಿಯಾದ್: ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಅಸಮರ್ಥನೀಯ ಯುದ್ಧವನ್ನು ಸೌದಿ ಅರೇಬಿಯಾ ಯಾವುದೇ ಮುಲಾಜಿಲ್ಲದೇ ತಿರಸ್ಕರಿಸುತ್ತದೆ ಮತ್ತು ಖಂಡಿಸುತ್ತದೆ ಎಂದು ಸೌದಿ ಅರೇಬಿಯಾ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ದೃಢವಾಗಿ ಹೇಳಿದ್ದಾರೆ.

ಶನಿವಾರ ರಿಯಾದ್ ನಲ್ಲಿ ಆಯೋಜಿಸಲಾಗಿದ್ದ ಅಸಾಧಾರಣ ಜಂಟಿ ಅರಬ್-ಇಸ್ಲಾಮಿಕ್ ಶೃಂಗಸಭೆಯನ್ನು ಸೌದಿ ಅರೇಬಿಯಾ ದೊರೆ ಸಲ್ಮಾನ್ ಪರವಾಗಿ ಉದ್ಘಾಟಿಸಿ, ಅದರ ಅಧ್ಯಕ್ಷತೆ ವಹಿಸಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮಾತನಾಡುತ್ತಿದ್ದರು.

ಈ ಯುದ್ಧವು ಮಾನವೀಯತೆಯ ಮಹಾನ್ ದುರಂತವಾಗಿದೆ ಎಂದು ಬಣ್ಣಿಸಿದ ಯುವರಾಜ ಸಲ್ಮಾನ್, “ಇಸ್ರೇಲ್ ನ ಬರ್ಬರ ಮಾನವ ಹಕ್ಕು ಉಲ್ಲಂಘನೆಗಳನ್ನು ಹತ್ತಿಕ್ಕುವಲ್ಲಿನ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ವೈಫಲ್ಯವನ್ನು ಇದು ಬಯಲು ಮಾಡಿದೆ” ಎಂದು ಕಿಡಿ ಕಾರಿದ್ದಾರೆ.

ಕದನ ವಿರಾಮ ಘೋಷಿಸಬೇಕು ಹಾಗೂ ಗಾಝಾದಲ್ಲಿನ ನಾಗರಿಕರಿಗೆ ನೆರವು ಒದಗಿಸಲು ಮಾನವೀಯ ಕಾರಿಡಾರ್ ಅನ್ನು ತೆರೆಯಬೇಕು ಎಂಬ ತಮ್ಮ ಆಗ್ರಹವನ್ನು ಅವರು ಪುನರುಚ್ಚರಿಸಿದರು.

ಫೆಲೆಸ್ತೀನ್ ಪ್ರಾಂತ್ಯದಲ್ಲಿ ಭದ್ರತೆ, ಶಾಂತಿ ಹಾಗೂ ಸ್ಥಿರತೆ ಮರುಸ್ಥಾಪನೆಯಾಗಬೇಕಾದರೆ, ಅತಿಕ್ರಮಣ, ಮುತ್ತಿಗೆ ಹಾಗೂ ವಸಾಹತನ್ನು ಅಂತ್ಯಗೊಳಿಸಿ, ಫೆಲೆಸ್ತೀನಿಯನ್ನರ ನ್ಯಾಯಬದ್ಧ ಹಕ್ಕನ್ನು ಖಾತರಿಪಡಿಸಬೇಕು. 1967ರಲ್ಲಿದ್ದ ಗಡಿಯ ಅನ್ವಯ ಪೂರ್ವ ಜೆರುಸಲೇಂ ಅನ್ನು ಫೆಲೆಸ್ತೀನ್ ನ ರಾಜಧಾನಿಯಾಗಿಸಿ, ಅದು ಸ್ವತಂತ್ರ ದೇಶವಾಗಬೇಕು ಎಂದು ಯುವರಾಜ ಸಲ್ಮಾನ್ ಪುನರುಚ್ಚರಿಸಿದರು.

ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಫೆಲೆಸ್ತೀನ್ ಅಧ್ಯಕ್ಷ ಮಹಮೌದ್ ಅಬ್ಬಾಸ್, ಫೆಲೆಸ್ತೀನಿಯನ್ನರು ಸಾಟಿಯಿಲ್ಲದ ಜನಾಂಗೀಯ ಹತ್ಯೆ ಯುದ್ಧವನ್ನು ಎದುರಿಸುತ್ತಿದ್ದು, ಗಾಝಾ ಮೇಲಿನ ಆಕ್ರಮಣವನ್ನು ಸ್ಥಗಿತಗೊಳಿಸುವಂತೆ ಇಸ್ರೇಲ್ ಮೇಲೆ ಅಮೆರಿಕಾ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಇಸ್ರೇಲ್ ದಾಳಿಯ ಹಿನ್ನೆಲೆಯಲ್ಲಿ ಫೆಲೆಸ್ತೀನಿಯನ್ನರಿಗೆ ಅಂತಾರಾಷ್ಟ್ರೀಯ ರಕ್ಷಣೆ ಒದಗಿಸಬೇಕು ಎಂದೂ ಅವರು ಆಗ್ರಹಿಸಿದರು.

ಇದೇ ವೇಳೆ, ಮುಸ್ಲಿಂ ದೇಶಗಳು ಇಸ್ರೇಲ್ ಮೇಲೆ ತೈಲ ಮತ್ತು ಸರಕುಗಳ ದಿಗ್ಬಂಧನ ವಿಧಿಸಬೇಕು ಹಾಗೂ ಇಸ್ರೇಲ್ ಸೇನೆಯನ್ನು ‘ಭಯೋತ್ಪಾದಕ ಗುಂಪು’ ಎಂದು ಘೋಷಿಸಬೇಕು ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರಯಿಸಿ ಕರೆ ನೀಡಿದರು.

ಗಾಝಾ ಪಟ್ಟಿಯ ಮೇಲೆ ಅಂತಾರಾಷ್ಟ್ರೀಯವಾಗಿ ನಿಷೇಧಗೊಂಡಿರುವ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸುತ್ತಿದ್ದು, ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ಅವರು ಆರೋಪಿಸಿದರು.

ಶನಿವಾರ ಪ್ರಾರಂಭಗೊಂಡ ಶೃಂಗಸಭೆಯಲ್ಲಿ ಇರಾನ್ ಅಧ‍್ಯಕ್ಷ ಎಬ್ರಾಹಿಂ ರೈಸಿ, ಫೆಲೆಸ್ತೀನ್ ಅಧ್ಯಕ್ಷ ಮಹಮೌದ್ ಅಬ್ಬಾಸ್, ಈಜಿಪ್ಟ್ ನ ಅಬ್ದೆಲ್ ಫತಾ ಎಲ್-ಸಿಸಿ, ಸಿರಿಯಾದ ಬಶರ್ ಅಲ್-ಅಸ್ಸಾದ್ ಸೇರಿದಂತೆ ಹಲವಾರು ಅರಬ್ ನಾಯಕರು ಹಾಗೂ ಇರಾಕ್ ನ ಅಬ್ದುಲ್ ಲತೀಫ್ ರಶೀದ್ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News