ಹಮಾಸ್ ರಾಜಕೀಯ ವರಿಷ್ಠ ಇಸ್ಮಾಯಿಲ್ ಹಾನಿಯೆಹ್ ಗೆ ವಿದಾಯ | ಇರಾನ್ ನಾಯಕ ಅಯತೊಲ್ಲಾ ಅಲಿ ಖಾಮಿನೈ ನೇತೃತ್ವ

Update: 2024-08-01 17:48 GMT

PC : PTI

ಟೆಹರಾನ್: ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ ಹಮಾಸ್ನ ರಾಜಕೀಯ ವರಿಷ್ಠ ಇಸ್ಮಾಯಿಲ್ ಹಾನಿಯೆಹ್ ಅವರ ಗೌರವಾರ್ಥ ಟೆಹರಾನ್‌ನಲ್ಲಿ ನಡೆದ ಪ್ರಾರ್ಥನಾ ಸಭೆಯ ನೇತೃತ್ವವನ್ನು ಇರಾನ್ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಾಮಿನೈ ಅವರು ವಹಿಸಿದ್ದರು.

ಪ್ರಾರ್ಥನಾಸಭೆಗೆ ಮುನ್ನ ನಡೆದ ಹಾನಿಯೆಹ್ ಹಾಗೂ ಅವರ ಅಂಗರಕ್ಷಕರ ಪಾರ್ಥಿವಶರೀರಗಳ ಅಂತಿಮಯಾತ್ರೆಯಲ್ಲಿ ಟೆಹರಾನ್ನ ನಗರ ಕೇಂದ್ರದಲ್ಲಿ ಇರಾನ್ ಹಾಗೂ ಫೆಲೆಸ್ತೀನ್ ಧ್ವಜಗಳನ್ನು ಹಿಡಿದು ಸಾವಿರಾರು ನಾಗರಿಕರು ಭಾಗವಹಿಸಿದ್ದರು. ಆನಂತರ ಟೆಹರಾನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಾನಿಯೆಹ್ ಗೌರವಾರ್ಥ ಶ್ರದ್ಧಾಂಜಲಿ ಸಭೆ ನಡೆಯಿತು.

ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ್ದ ಹಾನಿಯೆಹ್ ಹಾಗೂ ಅವರ ಅಂಗರಕ್ಷಕರ ಮೃತದೇಹಗಳನ್ನು ಫೆಲೆಸ್ತೀನ್ ಧ್ವಜಗಳಿಂದ ಹೊದಿಸಲ್ಪಟ್ಟ ಶವಪೆಟ್ಟಿಗೆಗಳಲ್ಲಿ ಕೊಂಡೊಯ್ಯುತ್ತಿರುವ ದೃಶ್ಯಗಳನ್ನು ಇರಾನ್ನ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಗಳು ಪ್ರಸಾರ ಮಾಡಿವೆ. ಇರಾನ್ ನ ಉನ್ನತ ಅಧಿಕಾರಿಗಳು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹಾಗೂ ಇಸ್ಲಾಮಿಕ್ ರೆವೆಲ್ಯೂಶನರಿ ಗಾರ್ಡ್ಸ್ನ ವರಿಷ್ಠ ಜನರಲ್ ಹುಸೈನ್ ಸಲಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾನಿಯೆಹ್ ಅವರು ಇರಾನ್ನ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಟೆಹರಾನ್‌ಗೆ ಆಗಮಿಸಿದ್ದ ಅವರನ್ನು ಹತ್ಯೆ ಮಾಡಲಾಗಿತ್ತು.

ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಹಮಾಸ್ನ ವಿದೇಶಾಂಗ ಬಾಂಧವ್ಯಗಳ ವರಿಷ್ಠ ಖಲೀಲ್ ಅಲ್-ಹಯ್ಯಾ ಅವರು ಮಾತನಾಡಿ, ‘‘ನಾವು ಇಸ್ರೇಲಿಗೆ ಮಾನ್ಯತೆನೀಡುವುದಿಲ್ಲ ಎಂಬ ಇಸ್ಮಾಯಿಲ್ ಹಾನಿಯೆಹ್ ಅವರ ಘೋಷಣೆಯು ಅಜರಾಮರವಾಗಿ ಉಳಿಯಲಿದೆ ಹಾಗೂ ಫೆಲೆಸ್ತೀನ್ ನೆಲದಿಂದ ಇಸ್ರೇಲನ್ನು ಬೇರುಸಮೇತ ಕಿತ್ತೊಗೆಯುವ ತನಕ ಅದನ್ನು ಬೆನ್ನಟ್ಟುತ್ತಲೇ ಇರುತ್ತೇವೆ” ಎಂದು ಘೋಷಿಸಿದರು.

ಇರಾನ್ನ ಸಂಸತ್ನ ಸ್ಪೀಕರ್ ಮೊಹಮ್ಮದ್ ಬಾಘೇರ್ ಗಾಲಿಬಾಫ್ ಅವರು ಮಾತನಾಡಿ, ಹಾನಿಯೆಹ್ಅವರ ಸಾವಿಗೆ ಸೇಡು ತೀರಿಸಬೇಕೆಂಬ ಇರಾನ್ ಸರ್ವೋಚ್ಚ ನಾಯಕನ ಆದೇಶವನ್ನು ಖಂಡಿತವಾಗಿಯೂ ಜಾರಿಗೆ ತರಲಾಗುವುದೆಂದು ಹೇಳಿದರು.

ಇಸ್ರೇಲ್ ದಾಳಿಗೆ ಸೂಕ್ತ ಸಮಯದಲ್ಲಿ ಹಾಗೂ ಸೂಕ್ತ ಸ್ಥಳದಲ್ಲಿ ಪ್ರತಿಕ್ರಿಯಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮೊಹಮ್ಮದ್ ಬಾಘೇರ್ ಅವರು ‘ ಇಸ್ರೇಲ್ ಸಾಯಲಿ. ಅಮೆರಿಕ ಸಾಯಲಿ’’ ಎಂಬ ಜನಸಾಗರದ ಘೋಶಣೆಗಳ ನಡುವೆ ಹೇಳಿದರು.

ಅಂತಿಮ ಮೆರವಣಿಗೆಯಲ್ಲಿ ಹಾನಿಯೆಹ್ ಹಾಗೂ ಅವರ ಇಬ್ಬರು ಅಂಗರಕ್ಷಕ ಮೃತದೇಹಗಳನ್ನು ಫೆಲೆಸ್ತೀನ್ ಪ್ರಸಿದ್ಧ ಕೆಫಿಯಾ ಸ್ಕಾರ್ಫ್ ಅನ್ನು ಹೋಲುವ ಬಣ್ಣಗಳ ಶವಪೆಟ್ಟಿಗೆಗಳನ್ನು ಪುಷ್ಪಗಳಿಂದ ಆಲಂಕೃತವಾದ ಟ್ರಕ್‌ಗಳಲ್ಲಿ ಕೊಂಡೊಯ್ಯಲಾಯಿತು.

ಹಾನಿಯೆಹ್ ಅವರ ಪಾರ್ಥಿವಶರೀರದ ಅಂತ್ಯಕ್ರಿಯೆ ಕತರ್‌ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News