ಢಾಕಾದ ಬೀದಿಗಳಲ್ಲಿ ಧ್ವಜ ಬೀಸಿ ಸಂಭ್ರಮಿಸಿದ ಜನಸಮೂಹ | ಶೇಖ್ ಮುಜಿಬುರ್ ರೆಹಮಾನ್ ಪ್ರತಿಮೆ ಧ್ವಂಸ

Update: 2024-08-05 15:32 GMT

PC : geo.tv

ಢಾಕಾ : ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ತೆರಳಿದ್ದಾರೆ ಎಂಬ ವರದಿ ಪ್ರಸಾರವಾಗುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ದೇಶದ ಧ್ವಜಗಳನ್ನು ಬೀಸುತ್ತಾ ಸಂಭ್ರಮಿಸಿದರಲ್ಲದೆ, ಕರ್ಫ್ಯೂ ಉಲ್ಲಂಘಿಸಿ ರಾಜಧಾನಿ ಢಾಕಾದಲ್ಲಿನ ಪ್ರಧಾನಿಯ ಬಂಗಲೆಗೆ ನುಗ್ಗಿರುವುದಾಗಿ ಉನ್ನತ ಮೂಲಗಳು ಹೇಳಿವೆ.

ಢಾಕಾದಲ್ಲಿದ್ದ ಬಾಂಗ್ಲಾದೇಶದ ಮಾಜಿ ಅಧ್ಯಕ್ಷ, ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರಹಮಾನ್ ಅವರ ಪ್ರತಿಮೆಯನ್ನು ಜನರ ಗುಂಪು ಧ್ವಂಸಗೊಳಿಸಿದೆ. ಶಸ್ತ್ರಸಜ್ಜಿತ ವಾಹನಗಳ ಸಹಿತ ಸಜ್ಜುಗೊಂಡಿದ್ದ ಯೋಧರು ಹಾಗೂ ಪೊಲೀಸರು ಹಸೀನಾ ಅವರ ಸರಕಾರಿ ಕಚೇರಿಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿದ್ದರೂ, ಭಾರೀ ಸಂಖ್ಯೆಯಲ್ಲಿದ್ದ ಉದ್ರಿಕ್ತ ಗುಂಪು ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಪ್ರಧಾನಿ ನಿವಾಸಕ್ಕೆ ನುಗ್ಗಿದರು. ಸುಮಾರು 4 ಲಕ್ಷ ಜನರು ಪ್ರವಾಹೋಪಾದಿಯಲ್ಲಿ ಮುಂದೊತ್ತಿ ಬಂದಾಗ ಅವರನ್ನು ತಡೆಯುವ ಎಲ್ಲಾ ಪ್ರಯತ್ನ ವಿಫಲವಾಗಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕಳೆದ ವಾರಾಂತ್ಯ ಮತ್ತೆ ಪ್ರತಿಭಟನೆ ಭುಗಿಲೆದ್ದ ಬಳಿಕ ರವಿವಾರ ನಡೆದ ಘರ್ಷಣೆಯಲ್ಲಿ 14 ಪೊಲೀಸ್ ಅಧಿಕಾರಿಗಳ ಸಹಿತ ಕನಿಷ್ಠ 98 ಜನರು ಮೃತಪಟ್ಟಿದ್ದು ಜುಲೈ 1ರಂದು ಆರಂಭಗೊಂಡಿದ್ದ ಪ್ರತಿಭಟನೆಯಲ್ಲಿ ಮೃತರ ಸಂಖ್ಯೆ ಕನಿಷ್ಠ 300ಕ್ಕೆ ಏರಿತ್ತು. ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ಕಳೆದ ತಿಂಗಳು ಆರಂಭಗೊಂಡಿದ್ದ ರ‍್ಯಾಲಿಗಳು ಕ್ರಮೇಣ ಪ್ರಧಾನಿ ಹಸೀನಾರ 15 ವರ್ಷಗಳ ಆಡಳಿತಾವಧಿಯಲ್ಲಿ ನಡೆದ ಅತ್ಯಂತ ತೀವ್ರ ಗಲಭೆಯ ರೂಪಕ್ಕೆ ತಿರುಗಿದ್ದು ಪ್ರಧಾನಿ ರಾಜೀನಾಮೆಗೆ ಪ್ರತಿಭಟನಾಕಾರರು ಆಗ್ರಹಿಸಿದ್ದರು.

► ಬಾಂಗ್ಲಾ ಪ್ರತಿಭಟನೆ: ಘಟನಾವಳಿ

ಜುಲೈ 1: ಸರಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ವಿರೋಧಿಸಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆ ಕೈಬಿಡುವಂತೆ ಪ್ರಧಾನಿ (ಈಗ ಮಾಜಿ) ಹಸೀನಾ ಹಾಗೂ ಸುಪ್ರೀಂಕೋರ್ಟ್ ಮಾಡಿದ ಮನವಿಯನ್ನು ಧಿಕ್ಕರಿಸಿ ಪ್ರತಿಭಟನೆ ಮುಂದುವರಿಸಿದ ವಿದ್ಯಾರ್ಥಿಗಳು, ಸರಕಾರಿ ಉದ್ಯೋಗದಲ್ಲಿ ಪ್ರತಿಭೆ ಆಧಾರಿತ ನೇಮಕಾತಿ ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಜುಲೈ 16: ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ವಿದ್ಯಾರ್ಥಿಗಳು ಹಾಗೂ ಭದ್ರತಾ ಅಧಿಕಾರಿಗಳು ಮತ್ತು ಸರಕಾರದ ಪರ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್, ಅಶ್ರುವಾಯು ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಲಾಯಿತು. ಇಂಟರ್ ನೆಟ್ ಸ್ಥಗಿತಗೊಳಿಸಲಾಯಿತು ಮತ್ತು ಎಲ್ಲಾ ಬ್ಯಾಂಕ್ಗಳು, ಮಾರುಕಟ್ಟೆಗಳು, ಗಾರ್ಮೆಂಟ್ ಕಾರ್ಖಾನೆಗಳು, ಶಾಲೆ, ಕಾಲೇಜುಗಳನ್ನು ಅನಿರ್ಧಿಷ್ಟಾವಧಿಗೆ ಮುಚ್ಚಲಾಯಿತು. ಹಿಂಸಾಚಾರ, ಘರ್ಷಣೆಯಲ್ಲಿ ಕನಿಷ್ಠ 300 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜುಲೈ 21: ದೇಶದಾದ್ಯಂತ ವ್ಯಾಪಿಸಿದ ಗಲಭೆಯ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಲು ಸುಪ್ರೀಂಕೋರ್ಟ್ ಆದೇಶ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ನಿಗದಿಯಾಗಿದ್ದ ಮೀಸಲಾತಿಯನ್ನು 30%ದಿಂದ 5%ಕ್ಕೆ ಇಳಿಸಲು ಸುಪ್ರೀಂ ಸೂಚನೆ. ಇದರಿಂದ ಪ್ರತಿಭೆ ಆಧಾರಿತ ನೇಮಕಾತಿ ಪ್ರಮಾಣ 93%ಕ್ಕೆ ಹೆಚ್ಚಿತು.

ಜುಲೈ 24: ಇಂಟರ್ ನೆಟ್ ವ್ಯವಸ್ಥೆ ಮತ್ತು ಮೊಬೈಲ್ ಸಂಪರ್ಕ ಮರುಸ್ಥಾಪನೆಗೆ ಆಗ್ರಹಿಸಿ ಮತ್ತೆ ವಿದ್ಯಾರ್ಥಿಗಳ ಪ್ರತಿಭಟನೆ ಆರಂಭ. ಸೇನೆಯ ಬೆಂಬಲ.

ಆಗಸ್ಟ್ 4: ಸೇನೆಯನ್ನು ಹಿಂಪಡೆಯುವಂತೆ ಸರಕಾರಕ್ಕೆ ಮಾಜಿ ಸೇನಾ ಮುಖ್ಯಸ್ಥ ಜ| ಇಕ್ಬಾಲ್ ಕರೀಮ್ ಆಗ್ರಹ ಮತ್ತು ಪ್ರತಿಭಟನೆಯ ಸಂದರ್ಭ ನಡೆದ ಸಾವು-ನೋವಿಗೆ ಖಂಡನೆ. ಪ್ರತಿಭಟನಾಕಾರರಿಗೆ ಬೆಂಬಲ ಪುನರುಚ್ಚರಿಸಿದ ಸೇನಾ ಪಡೆಗಳ ಮುಖ್ಯಸ್ಥ ವಕಾರ್ ಉಝಮಾನ್, ಸಶಸ್ತ್ರ ಪಡೆಗಳು ಯಾವಾಗಲೂ ಜನರ ಜತೆಗಿರುತ್ತವೆ ಎಂಬ ಹೇಳಿಕೆ.

ಆಗಸ್ಟ್ 5: `ಢಾಕಾಕ್ಕೆ ಸುದೀರ್ಘ ರ‍್ಯಾಲಿ' ಘೋಷಿಸಿದ ಪ್ರತಿಭಟನಾಕಾರರಿಂದ ಶೇಖ್ ಹಸೀನಾರ ರಾಜೀನಾಮೆಗೆ ಆಗ್ರಹ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜೀನಾಮೆ ಘೋಷಿಸಿ ಢಾಕಾದ ಸರಕಾರಿ ನಿವಾಸದಿಂದ ತೆರಳಿದ ಹಸೀನಾ. ಪ್ರಧಾನಿ ಹಸೀನಾ ರಾಜೀನಾಮೆಯನ್ನು ದೃಢಪಡಿಸಿದ ಸೇನಾ ಮುಖ್ಯಸ್ಥರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News