ಗೂಗಲ್ ಮ್ಯಾಪ್ ನೋಡಿಕೊಂಡು ಚಾಲನೆ, ಮುರಿದು ಬಿದ್ದ ಸೇತುವೆಯಿಂದ ಕೆಳ ಬಿದ್ದ ಜೀಪ್ ; ಓರ್ವ ಮೃತ್ಯು

ಗೂಗಲ್ ಮ್ಯಾಪ್ ನೋಡಿಕೊಂಡು ಚಲಾಯಿಸಿದ ಪರಿಣಾಮ ಮುರಿದು ಬಿದ್ದಿರುವ ಸೇತುವೆಯಿಂದ ಜೀಪ್ ಕೆಳ ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಕರೋಲಿನಾದಲ್ಲಿ ವರದಿಯಾಗಿದೆ. ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಗೂಗಲ್ ಮ್ಯಾಪ್ ನಿರ್ದೇಶನದ ವಿರುದ್ಧ ಮೃತಪಟ್ಟ ಚಾಲಕನ ಕುಟುಂಬದ ಸದಸ್ಯರು ದಾವೆ ಹೂಡಿದ್ದು, ಸೇತುವೆ ಮುರಿದು ಬಿದ್ದಿರುವ ಬಗ್ಗೆ ಮಾಹಿತಿಯಿತ್ತಾದರೂ ಅದನ್ನು ತನ್ನ ಮ್ಯಾಪ್ ನಲ್ಲಿ ಅಪ್ಡೇಟ್ ಮಾಡಿರಲಿಲ್ಲವೆಂದು ಗೂಗಲ್ ಸ್ಪಷ್ಟೀಕರಣ ನೀಡಿದೆ

Update: 2023-09-21 12:11 GMT

ಕರೋಲಿನಾ (ಅಮೆರಿಕಾ): ಗೂಗಲ್ ಮ್ಯಾಪ್ ನೋಡಿಕೊಂಡು ಚಲಾಯಿಸಿದ ಪರಿಣಾಮ ಮುರಿದು ಬಿದ್ದಿರುವ ಸೇತುವೆಯಿಂದ ಜೀಪ್ ಕೆಳ ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಕರೋಲಿನಾದಲ್ಲಿ ವರದಿಯಾಗಿದೆ. ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಗೂಗಲ್ ಮ್ಯಾಪ್ ನಿರ್ದೇಶನದ ವಿರುದ್ಧ ಮೃತಪಟ್ಟ ಚಾಲಕನ ಕುಟುಂಬದ ಸದಸ್ಯರು ದಾವೆ ಹೂಡಿದ್ದು, ಸೇತುವೆ ಮುರಿದು ಬಿದ್ದಿರುವ ಬಗ್ಗೆ ಮಾಹಿತಿಯಿತ್ತಾದರೂ ಅದನ್ನು ತನ್ನ ಮ್ಯಾಪ್ ನಲ್ಲಿ ಅಪ್ಡೇಟ್ ಮಾಡಿರಲಿಲ್ಲವೆಂದು ಗೂಗಲ್ ಸ್ಪಷ್ಟೀಕರಣ ನೀಡಿದೆ ಎಂದು Associated Press ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಂಗಳವಾರ ವೇಕ್ ಕೌಂಟಿ ಉನ್ನತ ನ್ಯಾಯಾಲಯದಲ್ಲಿ ಹೂಡಲಾಗಿರುವ ದಾವೆಯ ಪ್ರಕಾರ, ವೈದ್ಯಕೀಯ ಸಾಧನಗಳ ಮಾರಾಟ ಪ್ರತಿನಿಧಿ ಹಾಗೂ ಇಬ್ಬರು ಮಕ್ಕಳ ತಂದೆಯಾದ ಫಿಲಿಪ್ ಪ್ಯಾಕ್ಸನ್ ಚಲಾಯಿಸುತ್ತಿದ್ದ ಜೀಪ್ ಗ್ಲೇಡಿಯೇಟರ್ ಹಿಕರಿಯಲ್ಲಿ ಹಿಮಪಾತಕ್ಕೆ ಬಿದ್ದು ಮುಳುಗಿದ್ದರಿಂದ ಸೆಪ್ಟೆಂಬರ್ 30, 2022ರಂದು ಮೃತಪಟ್ಟಿದ್ದರು. ಪ್ಯಾಕ್ಸನ್ ತಮ್ಮ ಪುತ್ರಿಯ ಒಂಬತ್ತನೆ ಜನ್ಮದಿನೋತ್ಸವವನ್ನು ಮುಗಿಸಿಕೊಂಡು ಅಪರಿಚಿತ ಮಾರ್ಗವಾಗಿ ಮನೆಗೆ ಮರಳುವಾಗ, ಗೂಗಲ್ ಮ್ಯಾಪ್ ಒಂಬತ್ತು ವರ್ಷಗಳ ಹಿಂದೆ ಮುರಿದು ಬಿದ್ದಿದ್ದ ಹಾಗೂ ಈವರೆಗೆ ರಿಪೇರಿಯಾಗಿರದ ಸೇತುವೆ ಮಾರ್ಗವಾಗಿ ಹಾದು ಹೋಗುವಂತೆ ನಿರ್ದೇಶನ ನೀಡಿತ್ತು ಎಂದು ಆರೋಪಿಸಲಾಗಿದೆ.

ಪ್ಯಾಕ್ಸನ್ ಚಲಾಯಿಸುತ್ತಿದ್ದ ಜೀಪನ್ನು ಮಗುಚಿ ಬಿದ್ದ ಹಾಗೂ ಭಾಗಶಃ ಮುಚ್ಚಿಹೋಗಿದ್ದ ಸ್ಥಿತಿಯಲ್ಲಿ ರಾಜ್ಯ ರಕ್ಷಣಾ ಪಡೆಗಳು ಪತ್ತೆ ಹಚ್ಚಿದ್ದವು. ಈ ರಸ್ತೆಯ ಮಾರ್ಗದಲ್ಲಿ ಯಾವುದೇ ಸೂಚನಾ ಫಲಕ ಅಥವಾ ತಡೆಗೋಡೆಗಳನ್ನು ನಿರ್ಮಿಸಲಾಗಿರಲಿಲ್ಲ. ತಡೆಗೋಡೆಯಿಲ್ಲದ ಸೇತುವೆಯ ಮೇಲೆ ಜೀಪ್ ಚಲಾಯಿಸಿರುವ ಪ್ಯಾಕ್ಸನ್, 20 ಅಡಿ ಆಳಕ್ಕೆ ಬಿದ್ದಿದ್ದಾರೆ ಎಂದು ದಾವೆಯಲ್ಲಿ ವಾದಿಸಲಾಗಿದೆ.

ಆ ಸೇತುವೆಯನ್ನು ಯಾವುದೇ ಸ್ಥಳೀಯ ಅಥವಾ ರಾಜ್ಯ ಪ್ರಾಧಿಕಾರಗಳು ನಿರ್ವಹಿಸುತ್ತಿಲ್ಲ ಎಂದು ಉತ್ತರ ಕರೋಲಿನಾ ರಾಜ್ಯ ಗಸ್ತುಪಡೆಯು ತಿಳಿಸಿದೆ. ದಾವೆಯಲ್ಲಿ ಹಲವಾರು ಖಾಸಗಿ ನಿರ್ವಹಣಾ ಕಂಪನಿಗಳನ್ನು ಹೆಸರಿಸಲಾಗಿದ್ದು, ಆ ಸೇತುವೆಯ ನಿರ್ವಹಣೆ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಜಮೀನಿಗೆ ಅವರೇ ಹೊಣೆಗಾರರು ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News