ಸಿನ್ವರ್ ಉತ್ತರಾಧಿಕಾರಿ ನೇಮಕವಿಲ್ಲ, ಹಮಾಸ್‍ಗೆ ದೋಹಾ ಮೂಲದ ಸಮಿತಿಯ ನೇತೃತ್ವ : ವರದಿ
ದೋಹ : ಹಮಾಸ್‍ನ ಈ ಹಿಂದಿನ ರಾಜಕೀಯ ವರಿಷ್ಠ ಇಸ್ಮಾಯಿಲ್ ಹಾನಿಯೆಹ್ ಹತ್ಯೆಯ ಬಳಿಕ ರೂಪಿಸಲಾಗಿದ್ದ ದೋಹಾ ಮೂಲದ ಐವರು ಸದಸ್ಯರ ಸಮಿತಿಯು ಹಮಾಸ್‍ನ ನಾಯಕತ್ವದ ಜವಾಬ್ದಾರಿ ನಿರ್ವಹಿಸಲಿದೆ ಎಂದು ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿದೆ.
ಕಳೆದ ವಾರ ಗಾಝಾದಲ್ಲಿ ಇಸ್ರೇಲ್ ಪಡೆಗಳಿಂದ ಕೊಲ್ಲಲ್ಪಟ್ಟ ಗುಂಪಿನ ಮಾಜಿ ಮುಖ್ಯಸ್ಥ ಯಾಹ್ಯ ಸಿನ್ವರ್ ರ ಉತ್ತರಾಧಿಕಾರಿಯಾಗಿ ಒಬ್ಬ ನಾಯಕನನ್ನು ಆಯ್ಕೆ ಮಾಡುವ ಬದಲು ಸಮಿತಿಯನ್ನು ನೇಮಿಸಲು ಹಮಾಸ್ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
2025ರ ಮಾರ್ಚ್‍ಗೆ ನಿಗದಿಯಾಗಿರುವ (ಪರಿಸ್ಥಿತಿ ಅವಕಾಶ ಮಾಡಿಕೊಟ್ಟರೆ) ಹಮಾಸ್‍ನ ಮುಂದಿನ ಚುನಾವಣೆವರೆಗೆ ಮಾಜಿ ಮುಖ್ಯಸ್ಥರ ಉತ್ತರಾಧಿಕಾರಿಯನ್ನಾಗಿ ಯಾರನ್ನೂ ನೇಮಿಸಲು ಹಮಾಸ್ ನಾಯಕತ್ವ ಬಯಸುವುದಿಲ್ಲ ಎಂದು ಮೂಲಗಳು ಹೇಳಿವೆ. ಸಮಿತಿಯಲ್ಲಿ ಗಾಝಾ ಪ್ರತಿನಿಧಿ ಖಲೀಲ್ ಅಲ್-ಹಯಾ, ಪಶ್ಚಿಮ ದಂಡೆಯ ಪ್ರತಿನಿಧಿಯಾಗಿ ಜಹೆರ್ ಜಬರಿನ್, ವಿದೇಶದಲ್ಲಿರುವ ಫೆಲೆಸ್ತೀನೀಯರ ಪ್ರತಿನಿಧಿಯಾಗಿ ಖಾಲಿದ್ ಮಶಾಲ್, ಹಮಾಸ್‍ನ ಶೂರಾ ಸಲಹಾ ಸಮಿತಿಯ ಮುಖ್ಯಸ್ಥ ಮುಹಮ್ಮದ್ ದರ್ವಿಶ್ ಹಾಗೂ ರಾಜಕೀಯ ಬ್ಯೂರೊದ ಕಾರ್ಯದರ್ಶಿ(ಭದ್ರತೆಯ ಕಾರಣಕ್ಕೆ ಗುರುತನ್ನು ಬಹಿರಂಗಪಡಿಸಲಾಗುತ್ತಿಲ್ಲ) ಸದಸ್ಯರಾಗಿರುತ್ತಾರೆ. ಎಲ್ಲಾ ಐದು ಸದಸ್ಯರು ಪ್ರಸ್ತುತ ಖತರ್ ನಲ್ಲಿ ನೆಲೆಸಿದ್ದಾರೆ. ಸಮಿತಿಯು ಯುದ್ಧದ ಸಂದರ್ಭದಲ್ಲಿನ ಚಲನವಲನ ಮತ್ತು ಅಸಾಮಾನ್ಯ ಸಂದರ್ಭಗಳಲ್ಲಿ ಭವಿಷ್ಯದ ಯೋಜನೆಗಳನ್ನು ನಿಯಂತ್ರಿಸುವ ಕಾರ್ಯವನ್ನು ಹೊಂದಿದೆ. ಜತೆಗೆ ಕಾರ್ಯತಂತ್ರದ ನಿರ್ಧಾರಗಳನ್ನು ಮಾಡುವ ಅಧಿಕಾರವನ್ನೂ ಹೊಂದಿದೆ ಎಂದು ವರದಿ ಹೇಳಿದೆ.