ಸಂಗೀತೋತ್ಸವ ಮೇಲೆ ಹಮಾಸ್ ದಾಳಿ: 260 ಮೃತದೇಹ ಪತ್ತೆ

Update: 2023-10-09 04:13 GMT

Photo: twitter.com/Frankbilionz

ಟೆಲ್ ಅವೀವ್: ಇಸ್ರೇಲ್ ಮೇಲೆ ಮಿಂಚಿನ ದಾಳಿ ನಡೆಸಿದ ಹಮಾಸ್ ಕಾರ್ಯಕರ್ತರ ಕೆಂಗಣ್ಣು, ಸಾವಿರಾರು ಮಂದಿ ಪಾಲ್ಗೊಂಡಿದ್ದ ಟೆಕ್ನೋ ಸಂಗೀತೋತ್ಸವದ ಮೇಲೂ ಬಿದ್ದಿದೆ. ಗಾಜಾ ಸಮೀಪದ ಮರುಭೂಮಿಯಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದಲ್ಲಿ ದಾಳಿ ನಡೆದ ಸ್ಥಳದಿಂದ ಝಾಕಾ ಪರಿಹಾರ ಕಾರ್ಯಾಚರಣೆ ತಂಡ 260ಕ್ಕೂ ಹೆಚ್ಚು ಶವಗಳನ್ನು ಹೊರತೆಗೆದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ದಾಳಿಯ ಹಲವು ದೃಶ್ಯಾವಳಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪರಿಸ್ಥಿತಿಯ ಭೀಕರತೆಯನ್ನು ಬಿಂಬಿಸುತ್ತಿವೆ. ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಇಸ್ರೇಲಿ ವಿದ್ಯಾರ್ಥಿನಿಯೊಬ್ಬಳನ್ನು ಹಮಾಸ್ ಹೋರಾಟಗಾರರ ತಂಡ ಅಪಹರಿಸಿದ್ದು, 30 ಮಂದಿ ತಮ್ಮ ವಶದಲ್ಲಿದ್ದಾರೆ ಎಂದು ಈ ಗುಂಪು ಹೇಳಿದೆ.

ಈ ಮಧ್ಯೆ ಇಸ್ರೇಲ್ಗೆ ಬೆಂಬಲವಾಗಿ ಅಮೆರಿಕದ ಯುದ್ಧವಿಮಾನಗಳು ಮತ್ತು ಯುದ್ಧನೌಕೆಗಳನ್ನು ಇಸ್ರೇಲ್ನ ಸನಿಹಕ್ಕೆ ಒಯ್ಯಲು ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ. ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಸೇನಾ ನೆರವನ್ನು ಇಸ್ರೇಲ್ಗೆ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಅಮೆರಿಕದ ನಾಲ್ಕು ಮಂದಿ ಪ್ರಜೆಗಳೂ ಇಸ್ರೇಲ್ ಮೇಲೆ ನಡೆದ ದಾಳಿಯ ವೇಳೆ ಜೀವ ಕಳೆದುಕೊಂಡಿದ್ದಾರೆ.

ಇಸ್ರೇಲ್ ಸೇನೆ ಹಮಾಸ್ ಕಾರ್ಯಕರ್ತರ ಮೇಲೆ ಪ್ರತಿದಾಳಿಯನ್ನು ನಡೆಸುತ್ತಿದ್ದು, ದಕ್ಷಿಣ ಇಸ್ರೇಲ್ ನ ಬೀದಿ ಬೀದಿಗಳಲ್ಲಿ ಕದನ ಮಂದುವರಿದಿದೆ.


Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News