ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

Update: 2023-10-21 03:44 GMT

Photo: twitter.com/CensoredMen

ಟೆಲ್ಅವೀವ್: ಗಾಝಾ ಪಟ್ಟಿಯಲ್ಲಿ ಸೆರೆಹಿಡಿದಿದ್ದ ಅಮೆರಿಕದ ಇಬ್ಬರು ಒತ್ತೆಯಾಳುಗಳನ್ನು ಶುಕ್ರವಾರ ಬಿಡುಗಡೆ ಮಾಡಿರುವ ಹಮಾಸ್, ಮತ್ತಷ್ಟು ಮಂದಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಜ್ಯುಡಿತ್ ತಾಯ್ ರಾನನ್ ಮತ್ತು ಆಕೆಯ ಹದಿಹರೆಯದ ಮಗಳು ನತಾಲಿ ಶೋಷನಾ ರಾನನ್ ಅವರು ಶುಕ್ರವಾರ ಗಾಝಾ ಗಡಿಯಲ್ಲಿ ಇಸ್ರೇಲಿ ರಾಯಭಾರ ಕಚೇರಿ ಸಿಬ್ಬಂದಿಯನ್ನು ಭೇಟಿ ಮಾಡಿದ್ದು, ಅವರನ್ನು ಕೇಂದ್ರ ಇಸ್ರೇಲಿನ ಮಿಲಿಟರಿ ನೆಲೆಗೆ ಕರೆದೊಯ್ಯಲಾಗಿದೆ.

ಬಿಡುಗಡೆಯನ್ನು ದೃಢಪಡಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಉಭಯ ದೇಶಗಳ ಪುನಶ್ಚೇತನ ಮತ್ತು ಶಮನ ಪ್ರಕ್ರಿಯೆಯನ್ನು ಸರ್ಕಾರ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ಘೋಷಿಸಿದ್ದಾರೆ.

"ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಹೋರಾಟಗಾರರು ನಡೆಸಿದ ದಾಳಿಯ ವೇಳೆ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್ನರನ್ನು ಬಿಡುಗಡೆ ಮಾಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಸಹ ಪ್ರಜೆಗಳು ಕಳೆದ 14 ದಿನಗಳಿಂದ ಭಯಾನಕ ಘಟನಾವಳಿಗಳಿಗೆ ಸಾಕ್ಷಿಯಾಗಿದ್ದಾರೆ. ಇವರು ಶೀಘ್ರವೇ ಭಯಭೀತರಾಗಿರುವ ತಮ್ಮ ಕುಟುಂಬಗಳ ಜತೆ ಮತ್ತೆ ಸೇರುವುದರಿಂದ ಅತೀವ ಸಂತಸವಾಗಿದೆ" ಎಂದು ಅಮೆರಿಕದ ಅಧ್ಯಕ್ಷ ಬೈಡನ್ ಹೇಳಿಕೆ ನೀಡಿದ್ದಾರೆ.

ಗಾಝಾ ಆಡಳಿತಗಾರರು ಸೆರೆ ಇರಿಸಿಕೊಂಡಿರುವ 200 ಒತ್ತೆಯಾಳುಗಳ ಪೈಕಿ ಬಿಡುಗಡೆಯಾದವರಲ್ಲಿ ರಾನನ್ ಮೊದಲಿಗರು. ನಾಗರಿಕ ಒತ್ತೆಯಾಳುಗಳ ಬಿಡುಗಡೆಗಾಗಿ ಹಮಾಸ್,  ಕತಾರ್ ಹಾಗೂ ಈಜಿಪ್ಟ್ ಜತೆಗೆ ಕಾರ್ಯ ನಿರ್ವಹಿಸಲಿದ್ದು, ಇದರಿಂದ ಮತ್ತಷ್ಟು ಮಂದಿಯ ಬಿಡುಗಡೆಯ ಸುಳಿವು ದೊರಕಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News