ಇನ್ನಿಬ್ಬರು ಒತ್ತೆಯಾಳುಗಳ ಸ್ವೀಕಾರಕ್ಕೆ ಇಸ್ರೇಲ್ ನಿರಾಕರಣೆ: ಹಮಾಸ್

Update: 2023-10-22 09:36 GMT

Photo: PTI

ಗಾಝಾ: ಮಾನವೀಯ ನೆಲೆಯಲ್ಲಿ ಇನ್ನೂ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ತಾನು ಬಯಸಿದ್ದೆ, ಆದರೆ ಅವರನ್ನು ಸ್ವೀಕರಿಸಲು ಇಸ್ರೇಲ್ ನಿರಾಕರಿಸಿದೆ ಎಂದು ಹಮಾಸ್ ಹೇಳಿದೆ. ಆದರೆ ಇಸ್ರೇಲ್,ಇದೊಂದು ಪ್ರಚಾರಕ್ಕಾಗಿ ನೀಡಿರುವ ಹೇಳಿಕೆ ಎಂದು ಟೀಕಿಸಿದೆ.

ಶುಕ್ರವಾರ ಇನ್ನೂ ಇಬ್ಬರನ್ನು ಬಿಡುಗಡೆಗೊಳಿಸುವ ಗುಂಪಿನ ಉದ್ದೇಶವನ್ನು ಕತರ್‌ಗೆ ತಿಳಿಸಲಾಗಿತ್ತು ಎಂದು ಹಮಾಸ್‌ನ ಸಶಸ್ತ್ರ ಘಟಕದ ವಕ್ತಾರ ಅಬು ಉಬೈದ್ ಹೇಳಿದರು. ಅದೇ ದಿನ ಹಮಾಸ್ ಅಮೆರಿಕ ಪ್ರಜೆಗಳಾದ ಜುಡಿತ್ ರ್ಯಾನಾನ್ ಮತ್ತು ಪುತ್ರಿ ನತಾಲೀ ಅವರನ್ನು ಬಿಡುಗಡೆಗೊಳಿಸಿತ್ತು.

ಜುಡಿತ್ ಮತ್ತು ನತಾಲೀ ಅವರ ಬಿಡುಗಡೆಗಾಗಿ ಅನುಸರಿಸಿದ್ದ ಕಾರ್ಯವಿಧಾನವನ್ನೇ ಬಳಸಿಕೊಂಡು ರವಿವಾರ ಇನ್ನೂ ಇಬ್ಬರನ್ನು ಬಿಡುಗಡಗೊಳಿಸಲು ಹಮಾಸ್ ಸಿದ್ಧವಾಗಿತ್ತು ಎಂದು ನಂತರದ ಹೇಳಿಕೆಯಲ್ಲಿ ಉಬೈದ್ ತಿಳಿಸಿದರು.

ಅ.7ರಂದು ದಕ್ಷಿಣ ಇಸ್ರೇಲ್‌ನಲ್ಲಿ ದಾಳಿ ನಡೆಸಿದ್ದ ಸಂದರ್ಭ ಹಮಾಸ್ ಸುಮಾರು 210 ಜನರನ್ನು ಸೆರೆ ಹಿಡಿದಿತ್ತು.

ಶುಕ್ರವಾರ ಜುಡಿತ್ ಮತ್ತು ನತಾಲೀ ಬಿಡುಗಡೆಗೆ ಮಧ್ಯಸ್ಥಿಕೆಯಲ್ಲಿ ನೆರವಾಗಿದ್ದ ಕತರ್ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

‘ಹಮಾಸ್‌ನ ಸುಳ್ಳು ಪ್ರಚಾರವನ್ನು ನಾವು ಪ್ರಸ್ತಾವಿಸುವುದಿಲ್ಲ. ಅಪಹರಿಸಲ್ಪಟ್ಟಿರುವ ಮತ್ತು ನಾಪತ್ತೆಯಾಗಿರುವ ಎಲ್ಲರನ್ನೂ ಮರಳಿ ಪಡೆಯಲು ನಾವು ಎಲ್ಲ ರೀತಿಯಲ್ಲಿಯೂ ಕಾರ್ಯವನ್ನು ಮುಂದುವರಿಸುತ್ತೇವೆ ’ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಸಂಕ್ಷಿಪ್ತ ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News