ಚೀನಾದಲ್ಲಿ ಭಾರೀ ಹಿಮಪಾತ ; ಸಂಕಷ್ಟದಲ್ಲಿ ಪ್ರವಾಸಿಗಳು
ಬೀಜಿಂಗ್ : ಚೀನಾದ ವಾಯವ್ಯ ಕ್ಸಿನ್‍ಜಿಯಾಂಗ್ ಪ್ರಾಂತದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು ಖ್ಯಾತ ಪ್ರವಾಸೀತಾಣ ಹೆಮು ಗ್ರಾಮದಲ್ಲಿ ಸುಮಾರು 1000 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ಥಿರ ಹವಾಮಾನವು ಪ್ರವಾಸಿಗರ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಸರಕಾರಿ ಸ್ವಾಮ್ಯದ ಸಿಸಿಟಿವಿ ಮಂಗಳವಾರ ವರದಿ ಮಾಡಿದೆ.
ಕಝಕ್‍ಸ್ತಾನ, ರಶ್ಯ ಮತ್ತು ಮಂಗೋಲಿಯಾ ಗಡಿ ಸನಿಹದ ರಮಣೀಯ ಪ್ರವಾಸೀ ತಾಣ ಹೆಮು ಗ್ರಾಮದಲ್ಲಿ ಪ್ರವಾಸಿಗರು ಸಿಕ್ಕಿಬಿದ್ದಿದ್ದು ಹಲವು ದಿನಗಳ ನಿರಂತರ ಹಿಮಪಾತದಿಂದಾಗಿ ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕ್ಸಿನ್‍ಜಿಯಾಂಗ್ ಪ್ರಾಂತದ ಅಲ್ಟಾಯ್ ಪರ್ವತ ಪ್ರದೇಶದಲ್ಲಿ ಹಿಮಪಾತ ಹೆಚ್ಚಿದ್ದು ಸಮೀಪದ ಹೆದ್ದಾರಿಗಳು ಮೀಟರ್ ಎತ್ತರದಷ್ಟು ಮಂಜಿನಿಂದ ಆವೃತಗೊಂಡಿರುವುದರಿಂದ ರಸ್ತೆ ಸಂಚಾರ ದುಸ್ತರವಾಗಿದೆ. ಕೆಲವು ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ಅಲ್ಲಿಂದ ತೆರವುಗೊಳಿಸಲಾಗಿದೆ. ರಸ್ತೆಗೆ ಬಿದ್ದಿರುವ ಮಂಜುಗಡ್ಡೆಯ ರಾಶಿಗಳಡಿ ಕಸಕಡ್ಡಿ, ಕಲ್ಲುಗಳು, ಮರದ ಗೆಲ್ಲುಗಳು ಸೇರಿರುವುದರಿಂದ ಹಿಮ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ 53 ಸಿಬಂದಿ ಹಾಗೂ 31 ಹಿಮ ತೆರವು ಯಂತ್ರಗಳನ್ನು ನಿಯೋಜಿಸಲಾಗಿದೆ ಎಂದು ಅಲ್ಟಾಯ್‍ನ ಹೆದ್ದಾರಿ ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
ಅಮೆರಿಕ: ಹಿಮಮಾರುತಕ್ಕೆ 9 ಮಂದಿ ಬಲಿ
ವಾಷಿಂಗ್ಟನ್, ಜ.16: ಹಿಮಸ್ಫೋಟದಿಂದಾಗಿ ಅಮೆರಿಕದಾದ್ಯಂತ ಹಿಮ ಮಾರುತ ಬೀಸುತ್ತಿದ್ದು ಕನಿಷ್ಟ 9 ಮಂದಿ ಸಾವನ್ನಪ್ಪಿದ್ದಾರೆ. 6 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು ಅಮೆರಿಕದ 80%ದಷ್ಟು ಪ್ರದೇಶಗಳಲ್ಲಿ ತಾಪಮಾನ ಶೂನ್ಯ ಡಿಗ್ರಿಗಿಂತ ಕೆಳಗಿಳಿದಿದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆ ಹೇಳಿದೆ.
ಸೋಮವಾರ ಅಮೆರಿಕದ 20ಕ್ಕೂ ಅಧಿಕ ನಗರಗಳಲ್ಲಿ ಅತ್ಯಂತ ಕನಿಷ್ಟ ತಾಪಮಾನ ದಾಖಲಾಗಿದ್ದು 1,200ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ. 4,700 ವಿಮಾನಗಳ ಪ್ರಯಾಣ ವಿಳಂಬಗೊಂಡಿದೆ. ಜನತೆ ಹೆಚ್ಚು ವಿದ್ಯುತ್ ಬಳಸದಂತೆ ವಿದ್ಯುತ್ ಸ್ಥಾವರದ ನಿರ್ವಹಣಾಧಿಕಾರಿ ಮನವಿ ಮಾಡಿದ್ದಾರೆ.
ಶೀತ ಹವಾಮಾನ ಮತ್ತು ಹಿಮ ಮಾರುತ ಮುಂದುವರಿಯುವ ನಿರೀಕ್ಷೆ ಇರುವುದರಿಂದ ಜನತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.