ಕೆಂಪು ಸಮುದ್ರದಲ್ಲಿ ಮತ್ತೊಂದು ಹಡಗು ಮುಳುಗಿಸಿದ ಹೌದಿಗಳು
ಸನಾ: ಯೆಮನ್‍ನಲ್ಲಿನ ಹೌದಿ ಬಂಡುಗೋರರು ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಮತ್ತೊಂದು ಸರಕು ನೌಕೆಯ ಮೇಲೆ ದಾಳಿ ಮಾಡಿ ಅದನ್ನು ಮುಳುಗಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಲಿಬೆರಿಯಾದ ಧ್ವಜ ಹೊಂದಿರುವ, ಗ್ರೀಕ್ ಮಾಲಕತ್ವದ ಮತ್ತು ನಿರ್ವಹಣೆಯ ಟ್ಯೂಟರ್ ಎಂಬ ಹೆಸರಿನ ಸರಕುನೌಕೆ ಹೌದಿಗಳ ದಾಳಿಯಲ್ಲಿ ಜಖಂಗೊಂಡು ಕೆಂಪು ಸಮುದ್ರದಲ್ಲಿ ಮುಳುಗಿದೆ ಮತ್ತು ಇದರ ಸಿಬಂದಿಗಳು ಮೃತಪಟ್ಟಿರುವ ಸಾಧ್ಯತೆಯಿದೆ. ಈ ಸರಕು ನೌಕೆಯ ಅಂತಿಮ ಸಂಪರ್ಕದ ಸ್ಥಳದಲ್ಲಿ ಸಮುದ್ರದ ನೀರಿನಲ್ಲಿ ತೈಲ ಮತ್ತು ಹಡಗಿನ ಚೂರುಗಳು ಕಂಡುಬಂದಿದೆ ಎಂದು ಬ್ರಿಟನ್ ಮಿಲಿಟರಿಯ `ಯುನೈಟೆಡ್ ಕಿಂಗ್‍ಡಮ್ ಮರಿಟೈಮ್ ಟ್ರೇಡ್ ಆಪರೇಷನ್ಸ್ ಸೆಂಟರ್' ಹೇಳಿದ್ದು ಈ ಪ್ರದೇಶದಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಿದೆ.
ಇದು ಗಾಝಾದಲ್ಲಿ ಇಸ್ರೇಲ್-ಹಮಾಸ್ ಯುದ್ಧ ತೀವ್ರಗೊಂಡ ಬಳಿಕ ಹೌದಿಗಳು ಕೆಂಪುಸಮುದ್ರ ವ್ಯಾಪ್ತಿಯಲ್ಲಿ ಮುಳುಗಿಸಿರುವ ಎರಡನೆಯ ಸರಕು ನೌಕೆಯಾಗಿದೆ. ಹಡಗು ಮುಳುಗಿರುವುದನ್ನು ಹೌದಿ ಮೂಲಗಳೂ ದೃಢಪಡಿಸಿವೆ.
ಟ್ಯೂಟರ್ ಹಡಗಿನ ಮೇಲೆ ಡ್ರೋನ್ ದೋಣಿ(ಮಾನವ ಸಿಬಂದಿ ರಹಿತ ಸ್ಫೋಟಕ ತುಂಬಿದ್ದ ದೋಣಿ) ಬಳಸಿ ಹೌದಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಹೌದಿಗಳ ದಾಳಿಯಿಂದಾಗಿ ಕಳೆದ ಡಿಸೆಂಬರ್ ನಿಂದ ಕೆಂಪು ಸಮುದ್ರದ ಮೂಲಕ ಸಾಗುವ ಕಂಟೈನರ್ ಹಡಗುಗಳ ಪ್ರಮಾಣದಲ್ಲಿ 90%ದಷ್ಟು ಇಳಿಕೆಯಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ಗುಪ್ತಚರ ಏಜೆನ್ಸಿ ವರದಿ ಮಾಡಿದೆ. ಜಾಗತಿಕ ಸಮುದ್ರವ್ಯಾಪಾರದ 15%ದಷ್ಟು ಕೆಂಪು ಸಮುದ್ರ ದಾರಿಯಾಗಿ ಸಾಗುತ್ತದೆ.
ಈ ಮಧ್ಯೆ, ಯೆಮನ್‍ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ರೇಮಾ ಪ್ರಾಂತದ ಮೇಲೆ ಬುಧವಾರ ಅಮೆರಿಕ ನೇತೃತ್ವದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಸ್ಥಳೀಯ ರೇಡಿಯೊ ಸ್ಟೇಷನ್ ಕಾರ್ಯಾಚರಿಸುತ್ತಿದ್ದ ಕಟ್ಟಡ ಸಂಪೂರ್ಣ ಧ್ವಂಸಗೊಂಡಿದೆ ಎಂದು ಹೌದಿ ನಿಯಂತ್ರಣದ ಸಬಾ ಸುದ್ದಿಸಂಸ್ಥೆ ವರದಿ ಮಾಡಿದೆ.