ಮತ್ತೆಷ್ಟು ಮುಗ್ಧ ಫೆಲೆಸ್ತೀನಿಯರನ್ನು ಇಸ್ರೇಲ್ ನರಮೇಧ ನಡೆಸಬೇಕಿದೆ? ಸರ್ಕಾರವನ್ನು ಪ್ರಶ್ನಿಸಿದ ಐರಿಶ್ ಸಂಸದ

Update: 2023-11-06 17:49 GMT

Picture credit: Twitter

ಡಬ್ಲಿನ್: ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಕುರಿತು ಐರ್ಲೆಂಡ್ ತಳೆದಿರುವ ನಿಲುವಿನ ಕುರಿತು ಸಂಸದ ರಿಚರ್ಡ್ ಬಾಯ್ಡ್ ಬ್ಯಾರೆಟ್ ಅವರು ಪ್ರಧಾನಿ ಲಿಯೊ ವರದ್ಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಸ್ರೇಲ್ ಕೃತ್ಯವನ್ನು ತೀವ್ರವಾಗಿ ಖಂಡಿಸಿದ ಬಾಯ್ಡ್ ಬ್ಯಾರೆಟ್, ಇಸ್ರೇಲ್ ನಡೆಸುತ್ತಿರುವುದು ಯುದ್ಧಾಪರಾಧ ಹಾಗೂ ನರಮೇಧ ಎಂದು ಹೇಳಿದ್ದು, ಇಸ್ರೇಲ್ ವಿರುದ್ಧ ಕೂಡಲೇ ಅಂತರ್ರಾಷ್ಟ್ರೀಯ ದಿಗ್ಬಂಧನ ಹೇರಬೇಕು ಹಾಗೂ ಈ ಕೃತ್ಯಕ್ಕೆ ಇಸ್ರೇಲನ್ನು ಹೊಣೆಯಾಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ, ಆ ಪ್ರಾಂತ್ಯದಲ್ಲಿ ಶಾಂತಿ ಹಾಗೂ ನ್ಯಾಯವನ್ನು ಸ್ಥಾಪಿಸಲು ಐರ್ಲೆಂಡ್ ಬದ್ಧವಾಗಿದೆ ಎಂದು ಪ್ರಧಾನಿ ವರದ್ಕರ್ ಒತ್ತಿ ಹೇಳಿದ್ದಾರೆ. ಈ ಸಮಸ್ಯೆಗೆ ದ್ವಿಪಕ್ಷೀಯ ಪರಿಹಾರವನ್ನು ಸೂಚಿಸಿರುವ ಅವರು, ಈ ಸಮಸ್ಯೆಯ ಪರಿಹಾರಕ್ಕೆ ಯೂರೋಪಿಯನ್ ಒಕ್ಕೂಟ, ಅಮೆರಿಕಾ ಹಾಗೂ ಮಧ್ಯಪ್ರಾಚ್ಯ ದೇಶಗಳ ಸಹಭಾಗಿತ್ವಕ್ಕೂ ಸಲಹೆ ನೀಡಿದ್ದಾರೆ.

ಅ.24ರಂದು ಐರಿಶ್ ಸಂಸತ್ತಿನಲ್ಲಿನ ತಮ್ಮ ಭಾಷಣದ ವೇಳೆ ತಮ್ಮ ದೇಶದ ಪ್ರಧಾನಿಗೆ ಕಠಿಣ ಪ್ರಶ್ನೆಗಳನ್ನು ಒಡ್ಡಿದ ರಿಚರ್ಡ್ ಬಾಯ್ಡ್ ಬ್ಯಾರೆಟ್, “ಎಷ್ಟು ಮಂದಿ ಫೆಲೆಸ್ತೀನ್ ನಾಗರಿಕರು, ಪುರುಷರು, ಮಹಿಳೆಯರು ಹಾಗೂ ಮಕ್ಕಳ ನರಮೇಧವನ್ನು ಇಸ್ರೇಲ್ ನಡೆಸಬೇಕಿದೆ? ಇನ್ನೆಷ್ಟು ಯುದ್ಧಾಪರಾಧಗಳನ್ನು ಇಸ್ರೇಲ್ ನಡೆಸಬೇಕಿದೆ ? ನೀವು ಇಸ್ರೇಲ್ ವಿರುದ್ಧ ದಿಗ್ಬಂಧನಗಳನ್ನು ಹೇರಿ, ಇಸ್ರೇಲ್ ರಾಜತಾಂತ್ರಿಕರನ್ನು ದೇಶದಿಂದ ಉಚ್ಚಾಟಿಸುವುದಕ್ಕೂ ಮುನ್ನ ಇಸ್ರೇಲ್ ದೇಶವು ಗಾಝಾ ಜನತೆ ಹಾಗೂ ಫೆಲೆಸ್ತೀನ್ ಮೇಲೆ ಅದೆಷ್ಟು ಹತ್ಯೆ ಮತ್ತು ವಿಧ್ವಂಸ ಕೃತ್ಯಗಳನ್ನು ನಡೆಸಬೇಕಿದೆ? ಮತ್ತೆಷ್ಟು ಕಾಲ ಅಂತರ್ರಾಷ್ಟ್ರೀಯ ಸಮುದಾಯವು ಫೆಲೆಸ್ತೀನ್ ನಾಗರಿಕರ ನರಳುವಿಕೆಗೆ ಕುರುಡಾಗಿರುತ್ತದೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ, ಏಕಾಂಗಿಯಾಗಿ ಹೇರಲಾಗುವ ದಿಗ್ಬಂಧನಗಳು ಅಷ್ಟು ಪರಿಣಾಮಕಾರಿಯಾಗುವುದಿಲ್ಲ ಎಂದು ಪ್ರತ್ಯುತ್ತರ ನೀಡಿದ ಪ್ರಧಾನಿ ವರದ್ಕರ್, ಬಿಕ್ಕಟ್ಟಿಗೆ ಗುರಿಯಾಗಿರುವ ದೇಶಗಳಲ್ಲಿ ರಾಜತಾಂತ್ರಿಕರನ್ನು ಹೊಂದುವುದರೊಂದಿಗೆ, ಆ ದೇಶಗಳ ನಡುವಿನ ಸಂಪರ್ಕವನ್ನು ಮುಕ್ತವಾಗಿಡಬೇಕಾದ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಅಲ್ಲದೆ, ಸಂಘಟಿತ ಶಿಕ್ಷೆ ಹಾಗೂ ಒತ್ತೆಯಾಳುಗಳನ್ನಾಗಿಸುವ ಕೃತ್ಯಗಳನ್ನು ಖಂಡಿಸಿದ ವರದ್ಕರ್, ನಾಗರಿಕರ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಳ್ಳವುದರ ವಿರುದ್ಧದ ಐರ್ಲೆಂಡ್ ದೃಢ ನಿಲುವನ್ನು ಪುನರುಚ್ಚರಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News