ಅಮೆರಿಕ ಚುನಾವಣೆ | ಕಮಲಾ ಹ್ಯಾರಿಸ್ - ಡೊನಾಲ್ಡ್ ಟ್ರಂಪ್ ಜಿದ್ದಾಜಿದ್ದಿನ ಸ್ಪರ್ಧೆ

Update: 2024-11-05 15:39 GMT

ಕಮಲಾ ಹ್ಯಾರಿಸ್ - ಡೊನಾಲ್ಡ್ ಟ್ರಂಪ್ | PC : PTI

 ವಾಷಿಂಗ್ಟನ್ : ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆಗೆ (ಭಾರತೀಯ ಕಾಲಮಾನದ ಪ್ರಕಾರ) ಮಂಗಳವಾರ ಸಂಜೆ 4:30ಕ್ಕೆ ಮತದಾನ ಆರಂಭಗೊಂಡಿದ್ದು ಬುಧವಾರ ಬೆಳಿಗ್ಗೆ 6:30ಕ್ಕೆ ಅಂತ್ಯವಾಗಲಿದೆ. ಡೆಮಾಕ್ರಟಿಕ್ ಅಭ್ಯರ್ಥಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿರುವುದಾಗಿ ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಮತದಾನಕ್ಕೆ ಕೇವಲ ಒಂದು ಗಂಟೆ ಇರುವಾಗ ಹೊರಬಿದ್ದ 538/ಎಬಿಸಿ ನ್ಯೂಸ್ ಸಮೀಕ್ಷೆಯ ಪ್ರಕಾರ ರಾಷ್ಟ್ರೀಯ ಮತದಾನದ ಸರಾಸರಿಯ ಪ್ರಕಾರ ಹ್ಯಾರಿಸ್ ಅವರು ಟ್ರಂಪ್ಗಿಂತ 1 ಪಾಯಿಂಟ್ ಮುನ್ನಡೆ ಸಾಧಿಸಿದ್ದಾರೆ. ಆದರೆ ಸ್ವಿಂಗ್ ರಾಜ್ಯಗಳೆಂದು ಗುರುತಿಸಲಾಗಿರುವ ಅರಿಜೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ಗಳಲ್ಲಿ ಆರಂಭಿಕ ಹಂತದ ಪ್ರಚಾರದಲ್ಲಿ ಹ್ಯಾರಿಸ್ ಮುನ್ನಡೆಯಲ್ಲಿದ್ದರೆ ಕ್ರಮೇಣ ಟ್ರಂಪ್ ಅವರತ್ತ ಮತದಾರರು ಒಲವು ತೋರಿರುವುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಆದ್ದರಿಂದ ಅಂತಿಮ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಿದೆ.

ಅಮೆರಿಕದ ಕಾಲಮಾನ ಪ್ರಕಾರ ನವೆಂಬರ್ 5ರ ಮಂಗಳವಾರ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆಯವರೆಗೆ ಮತದಾನ ನಡೆಯಲಿದ್ದು ಮೊದಲು ಮತದಾನ ನಡೆದ ಈಶಾನ್ಯ ರಾಜ್ಯವಾದ ನ್ಯೂ ಹ್ಯಾಂಪ್ಶೈರ್ನಲ್ಲಿ ಹ್ಯಾರಿಸ್ ಮತ್ತು ಟ್ರಂಪ್ ತಲಾ 3 ಓಟುಗಳನ್ನು ಪಡೆದು ಟೈ ಆಗಿದೆ. ದಶಕಗಳಿಂದಲೂ ನ್ಯೂ ಹ್ಯಾಂಪ್ಶೈರ್ ನಲ್ಲಿ ದೇಶದ ಉಳಿದ ಮತಗಟ್ಟೆಗಳು ತೆರೆಯುವ ಅರ್ಧ ಗಂಟೆ ಮೊದಲೇ ಮತದಾನ ಆರಂಭವಾಗುತ್ತಿದ್ದು ಮೊದಲ ಫಲಿತಾಂಶವೂ ಈ ರಾಜ್ಯದಿಂದಲೇ ಹೊರ ಬೀಳುತ್ತದೆ.

19ನೆಯ ಶತಮಾನದಿಂದಲೂ ಅಮೆರಿಕದಲ್ಲಿ ನವೆಂಬರ್ನ ಪ್ರಥಮ ಮಂಗಳವಾರವೇ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು ಕನಿಷ್ಠ 270 ಎಲೆಕ್ಟೋರಲ್ ಮತಗಳ ಅಗತ್ಯವಿದೆ.

►ಅಂತಿಮ ಫಲಿತಾಂಶ ಘೋಷಣೆ

ಅಮೆರಿಕದಲ್ಲಿ `ಮುಂಚಿತ ಮತದಾನ' ಪ್ರಕ್ರಿಯೆಯ ಮೂಲಕ ಸುಮಾರು 82 ದಶಲಕ್ಷ ಜನರು ತಮ್ಮ ಮತವನ್ನು ಚಲಾಯಿಸಿದ್ದಾರೆ. ಅಮೆರಿಕದ ಕಾಲಮಾನ ಮಂಗಳವಾರ ರಾತ್ರಿ 8 ಗಂಟೆಗೆ ಮತದಾನ ಮುಗಿಯುತ್ತದೆ. ಮೊದಲ ಮತದಾನ (ಅಮೆರಿಕದ ಕಾಲಮಾನ ಮಂಗಳವಾರ ಬೆಳಿಗ್ಗೆ 6 ಗಂಟೆ) ಮುಕ್ತಾಯಗೊಂಡ ಬೆನ್ನಲ್ಲೇ ಫಲಿತಾಂಶ ಹೊರಬೀಳುವುದನ್ನು ನಿರೀಕ್ಷಿಸಬಹುದು. ಆದರೆ ಎಲೆಕ್ಟೋರಲ್ ಕಾಲೇಜಿನ ಮತಗಳನ್ನು ಪರಿಗಣಿಸುವವರೆಗೆ ಅಧಿಕೃತ ಚುನಾವಣಾ ಫಲಿತಾಂಶಗಳನ್ನು ಘೋಷಿಸಲಾಗುವುದಿಲ್ಲ.

ಹೆಚ್ಚಿನ ಮತಗಳನ್ನು ಪಡೆದ ಅಭ್ಯರ್ಥಿಗಳ ಹೆಸರನ್ನು ಮತದಾನದ ದಿನದಂದೇ ಅಥವಾ ಮರುದಿನ ಬೆಳಿಗ್ಗೆ ಘೋಷಿಸಿದರೂ, ಈ ಬಾರಿಯ ನಿಕಟ ಸ್ಪರ್ಧೆಯ ಕಾರಣ ಅಂತಿಮ ಫಲಿತಾಂಶ ಘೋಷಣೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಬಿಬಿಸಿ ವರದಿ ಮಾಡಿದೆ. ಒಂದು ರಾಜ್ಯದಲ್ಲಿ ವಿಜೇತರನ್ನು ಘೋಷಿಸುವಾಗ ಮತ್ತೊಂದು ರಾಜ್ಯದಲ್ಲಿ ಮತ ಎಣಿಕೆ ನಡೆಯುತ್ತಿರುವ ಸಂದರ್ಭವೂ ಇರುತ್ತದೆ.

ಎರಡೂ ಅಭ್ಯರ್ಥಿಗಳು ಪಡೆದ ಮತಗಳಲ್ಲಿ ಅಲ್ಪ ಅಂತರವಿದ್ದರೆ ಮರು ಎಣಿಕೆ ನಡೆಯುತ್ತದೆ. ಪ್ರಮುಖ ಸ್ಪರ್ಧಿಗಳ ನಡುವಿನ ಮತಗಳ ಪ್ರಮಾಣದ ಅಂತರ ನಿರ್ದಿಷ್ಟ ಶ್ರೇಣಿಯ (0.5%)ದ ಒಳಗೆ ಇದ್ದರೆ ಆಗಲೂ ಮರು ಎಣಿಕೆಗೆ ಅವಕಾಶವಿರುತ್ತದೆ. ಮರು ಎಣಿಕೆಯ ಸಂದರ್ಭದಲ್ಲೂ ಫಲಿತಾಂಶ ಘೋಷಣೆ ವಿಳಂಬವಾಗುತ್ತದೆ. ಸ್ವಿಂಗ್ ರಾಜ್ಯಗಳ ಮತ ಎಣಿಕೆಯೂ ಸಂಭಾವ್ಯ ವಿಳಂಬಕ್ಕೆ ಕಾರಣವಾಗಬಹುದು.

ಅಮೆರಿಕದಲ್ಲಿ ಎಲೆಕ್ಟೋರಲ್ ಕಾಲೇಜು ಎಂಬ ಪ್ರಕ್ರಿಯೆಯಿದೆ. ಅಮೆರಿಕ ಸಂಸತ್ನ ಎರಡೂ ಸದನಗಳಲ್ಲಿ ಹೊಂದಿರುವ ಸ್ಥಾನಗಳ ಆಧಾರದಲ್ಲಿ ಪ್ರತಿಯೊಂದು ರಾಜ್ಯಗಳು ನಿರ್ಧಿಷ್ಟ ಸಂಖ್ಯೆಯ ಮತದಾರರನ್ನು ನಿಯೋಜಿಸುತ್ತವೆ. ಅಮೆರಿಕದ ಎಲೆಕ್ಟೋರಲ್ ಕಾಲೇಜಿನ 538 ಸದಸ್ಯರು ಚುನಾವಣೆಯ ನಂತರ ತಮ್ಮ ರಾಜ್ಯಗಳ ರಾಜಧಾನಿಯಲ್ಲಿ ಒಟ್ಟುಸೇರಿ ವಿಜೇತರನ್ನು ನಿರ್ಧರಿಸುತ್ತಾರೆ. ಕನಿಷ್ಠ 270 ಎಲೆಕ್ಟೋರಲ್ ಮತಗಳನ್ನು ಪಡೆದವರು ಗೆಲುವು ಸಾಧಿಸುತ್ತಾರೆ.

ಈ ಹಿಂದೆ, 2020ರಲ್ಲಿ ನವೆಂಬರ್ 3ರಂದು ಮತದಾನ ನಡೆದಿದ್ದರೆ ಜೋ ಬೈಡನ್ರನ್ನು ವಿಜೇತರೆಂದು ಘೋಷಿಸಿದ್ದು ನವೆಂಬರ್ 7ರಂದು. ಆದರೆ 2016ರಲ್ಲಿ ಮತದಾನ ನಡೆದ ದಿನ ರಾತ್ರಿಯೇ ಟ್ರಂಪ್ ರನ್ನು ವಿಜೇತರೆಂದು ಘೋಷಿಸಲಾಗಿತ್ತು. 2012ರಲ್ಲೂ ಬರಾಕ್ ಒಬಾಮಾರನ್ನು ಮತದಾನದ ದಿನ ರಾತ್ರಿಯೇ ವಿಜೇತರೆಂದು ಘೋಷಿಸಲಾಗಿತ್ತು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News