ಲಾಸ್ ಏಂಜಲೀಸ್ ನಲ್ಲಿ ಮತ್ತಷ್ಟು ಆವರಿಸಿದ ಕಾಡ್ಗಿಚ್ಚು : ಮೃತರ ಸಂಖ್ಯೆ 16ಕ್ಕೆ ಏರಿಕೆ, 12,000ಕ್ಕೂ ಅಧಿಕ ಕಟ್ಟಡಗಳು ಬೆಂಕಿಗಾಹುತಿ

Update: 2025-01-12 05:25 GMT

Photo | PTI

ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ ಲಾಸ್ ಏಂಜಲೀಸ್ ನಲ್ಲಿ ಈವರೆಗೆ ಕನಿಷ್ಠ 16 ಜನರು ಮೃತಪಟ್ಟಿದ್ದು, 12,000ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿದೆ.

ಲಾಸ್ ಏಂಜಲೀಸ್ ಕೌಂಟಿಯಲ್ಲಿ ಬೆಂಕಿಯು ಹೆಚ್ಚುವರಿಯಾಗಿ 1,000 ಎಕರೆಗಳಷ್ಟು ಪ್ರದೇಶಕ್ಕೆ ವಿಸ್ತರಿಸಿದೆ. ಹೆಚ್ಚಿನ ಮನೆಗಳಿಗೆ ಬೆಂಕಿ ಆವರಿಸಿದ್ದು, ಜನರನ್ನು ತುರ್ತು ಸ್ಥಳಾಂತರಿಸುವಂತೆ ಮಾಡಿದೆ. 1,00,000ಕ್ಕೂ ಅಧಿಕ ಮಂದಿ ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ಕಾಡ್ಗಿಚ್ಚಿನ ವೇಳೆ 13 ಮಂದಿ ಕಾಣೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರ ಬಗ್ಗೆ ದೂರು ನೀಡಲು ಕೇಂದ್ರವೊಂದನ್ನು ಕೂಡ ಸ್ಥಾಪಿಸಲಾಗಿದೆ.

ಲಾಸ್ ಏಂಜಲೀಸ್ ನಲ್ಲಿ ಕಳೆದು ಎಂಟು ತಿಂಗಳಿಂದ ಒಮ್ಮೆಯೂ ಮಳೆ ಸುರಿದಿಲ್ಲ. ʼಸಾಂತಾ ಅನಾʼ ಎಂದು ಕರೆಯಲಾದ ಶಕ್ತಿಶಾಲಿ ಒಣ ಹವೆಯಿಂದ ಸೃಷ್ಟಿಯಾದ ಬೆಂಕಿಯು ತನ್ನ ಕೆನ್ನಾಲಿಗೆಗಳನ್ನು ಚಾಚಿ ಲಾಸ್ ಏಂಜಲೀಸ್ ನಲ್ಲಿ ಮನೆಗಳು ಹಾಗೂ ಕಟ್ಟಡಗಳ ಆಹುತಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಜನವರಿ 7ರಂದು ಬೆಂಕಿ ಪ್ರಾರಂಭವಾದಾಗಿನಿಂದ ಸುಮಾರು 39,000 ಎಕರೆಗಳಷ್ಟು ಭೂಮಿ ಸುಟ್ಟು ಹೋಗಿದೆ. ಈ ವಿಸ್ತೀರ್ಣವು ಸ್ಯಾನ್ ಫ್ರಾನ್ಸಿಸ್ಕೋಗಿಂತ ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಯುಎಸ್ ಇತಿಹಾಸದಲ್ಲಿ ಇದು ಅತ್ಯಂತ ಭಯಾನಕ ಕಾಡ್ಗಿಚ್ಚಾಗಿದ್ದು, ಆರಂಭಿಕ ಅಂದಾಜುಗಳ ಪ್ರಕಾರ ಈಗಾಗಲೇ 150 ಶತಕೋಟಿ ಡಾಲರ್ ಆರ್ಥಿಕ ನಷ್ಟವುಂಟಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News