ಅಲ್ಪಸಂಖ್ಯಾತರ ಮೇಲಿನ ದಾಳಿ ರಾಜಕೀಯ ಪ್ರೇರಿತ: ಬಾಂಗ್ಲಾ ಸರ್ಕಾರ
ಢಾಕಾ: ರಾಜಕೀಯ ವಿಪ್ಲವ ಎದುರಿಸುತ್ತಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಅದರಲ್ಲೂ ಮುಖ್ಯವಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಕೋಮು ಉದ್ದೇಶದಿಂದ ನಡೆಯುತ್ತಿರುವ ದಾಳಿಯಲ್ಲ; ಇದು ರಾಜಕೀಯ ಪ್ರೇರಿತ ದಾಳಿ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಹೇಳಿಕೆ ನೀಡಿದೆ.
ಈ ಹೇಳಿಕೆಗೆ ವಿರುದ್ಧವಾದ ಹಲವು ಪುರಾವೆಗಳು ಇದ್ದರೂ, ಈ ಬಗೆಯ ಬಹುತೇಕ ದಾಳಿಗಳು ರಾಜಕೀಯ ಕಾರ್ಯಸೂಚಿಯಿಂದ ಪ್ರೇರಿತವಾಗಿವೆಯೇ ವಿನಃ ಧಾರ್ಮಿಕ ಅಸಹಿಷ್ಣುತೆಯಿಂದ ನಡೆದ ದಾಳಿಗಳಲ್ಲ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಕಳೆದ ವರ್ಷದ ಆಗಸ್ಟ್ ನಿಂದೀಚೆಗೆ ಕೋಮು ದಾಳಿಯ 115 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಕನಿಷ್ಠ 100 ಮಂದಿಯನ್ನು ಬಂಧಿಸಲಾಗಿದೆ ಎಂದು ಶನಿವಾರ ಬಿಡುಗಡೆ ಮಾಡಲಾದ ಪೊಲೀಸ್ ವರದಿ ಹೇಳಿದೆ.
ಆದರೆ ಮುಸ್ಲಿಂ ಬಾಹುಳ್ಯದ ದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿ ಮಾಡಿ 1769 ಕೋಮು ದಾಳಿಗಳು ಮತ್ತು ಧ್ವಂಸಗೊಳಿಸುವ ಘಟನೆಗಳು ಸಂಭವಿಸಿವೆ ಎನ್ನುವುದು ಬಾಂಗ್ಲಾದೇಶ ಹಿಂದೂ ಬುದ್ಧ ಕ್ರಿಶ್ಚಿಯನ್ ಏಕತಾ ಮಂಡಳಿಯ ಆರೋಪ. ವ್ಯಕ್ತಿಗಳು, ಆಸ್ತಿಗಳು ಮತ್ತು ಶ್ರದ್ಧಾಕೇಂದ್ರಗಳ ಮೇಲೆ ನಡೆದ ದಾಳಿಗಳು, ಆಸ್ತಿಪಾಸ್ತಿ ನಾಶಪಡಿಸುವುದು ಮತ್ತು ಲೂಟಿಯ 2100 ಘಟನೆಗಳು ವರದಿಯಾಗಿವೆ ಎಂದು ಮಂಡಳಿ ವಿವರಿಸಿದೆ.
ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು, 1,234 ಘಟನೆಗಳು ರಾಜಕೀಯ ಸ್ವರೂಪದ್ದು ಹಾಗೂ ಕೇವಲ 20 ಮಾತ್ರ ಕೋಮು ಸಂಬಂಧಿತ ದಾಳಿಗಳು ಎಂದು ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರ ಪತ್ರಿಕಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ 161 ಕ್ಲೇಮ್ ಗಳು ಸುಳ್ಳು ಅಥವಾ ತಪ್ಪುಮಾಹಿತಿಯಿಂದ ಕೂಡಿವೆ ಎಂದು ಅವರು ತಿಳಿಸಿದ್ದಾರೆ.