ಫ್ಲೋರಿಡಾಕ್ಕೆ ಅಪ್ಪಳಿಸಿದ ಇಡಾಲಿಯಾ ಚಂಡಮಾರುತ
ವಾಷಿಂಗ್ಟನ್: ಗಂಟೆಗೆ 125 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಇಡಾಲಿಯಾ ಚಂಡಮಾರುತ ಅಮೆರಿಕದ ಫ್ಲೋರಿಡಾ ರಾಜ್ಯದ ಬಿಗ್ಬೆಂಡ್ ಪ್ರಾಂತದ ಕೀಟನ್ ಬೀಚ್ ಬಳಿ ಅಪ್ಪಳಿಸಿದ್ದು ಈ ಶತಮಾನದಲ್ಲೇ ಬಿಗ್ಬೆಂಡ್ ಪ್ರದೇಶಕ್ಕೆ ಅಪ್ಪಳಿಸಿದ ಅತ್ಯಂತ ಪ್ರಬಲ ಚಂಡಮಾರುತವಾಗಿ ಗುರುತಿಸಿಕೊಂಡಿದೆ.
ಕಳೆದ 12 ತಿಂಗಳಲ್ಲಿ ಫ್ಲೋರಿಡಾ ರಾಜ್ಯ 3 ಚಂಡಮಾರುತಗಳ ಅಬ್ಬರಕ್ಕೆ ಸಿಲುಕಿದೆ. ಚಂಡಮಾರುತದ ಪ್ರಹಾರವನ್ನು ಎದುರಿಸಲು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ(ಫೆಮಾ) ಸರ್ವ ಸಿದ್ಧತೆ ಮಾಡಿಕೊಂಡಿದೆ. ಗ್ರಾಮೀಣ ಶೋಧ ಮತ್ತು ರಕ್ಷಣಾ ತಂಡ, ತುರ್ತು ಪರಿಸ್ಥಿತಿ ನಿರ್ವಹಣಾ ತಂಡದ ಸಹಿತ ಹಲವು ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದ್ದು ‘ಫೆಮಾ’ದ ಗೋದಾಮುಗಳಲ್ಲಿ ಆಹಾರ, ನೀರು, ಹೊದಿಕೆಗಳು, ವೈದ್ಯಕೀಯ ನೆರವು, ಔಷಧಗಳನ್ನು ಸಂಗ್ರಹಿಸಲಾಗಿದೆ.
ಬಿಗ್ಬೆಂಡ್ ಪ್ರಾಂತದ ಟೇಲರ್ ಕೌಂಟಿ, ಡಿಕ್ಸಿ ಕೌಂಟಿ ಮತ್ತು ಲೆವಿ ಕೌಂಟಿಯಲ್ಲಿ ವ್ಯಾಪಕ ಹಾನಿಯಾಗಿದ್ದು ಸುಮಾರು 1,16,000 ನಿವಾಸಿಗಳಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ. ಕ್ರಮೇಣ ಹೆಚ್ಚು ತೀವ್ರತೆ ಪಡೆಯುತ್ತಿರುವ ಚಂಡಮಾರುತ ಗಂಟೆಗೆ 130 ಕಿ.ಮೀ ವೇಗದ ಗಾಳಿಯೊಂದಿಗೆ 4ನೇ ಹಂತದ ಚಂಡಮಾರುತವಾಗಿ ರೂಪುಗೊಂಡಿದೆ. ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಪ್ರವಾಹದ ಸ್ಥಿತಿ ಉಂಟಾಗಿದೆ. ಫ್ಲೋರಿಡಾದ ಗಲ್ಫ್ ಕರಾವಳಿ ಉದ್ದಕ್ಕೂ 16 ಅಡಿಯಷ್ಟು ಎತ್ತರದ ಸಮುದ್ರದ ಅಲೆ ಏಳಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕರಾವಳಿ ಪ್ರದೇಶದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಿರುವ ಸಾಧ್ಯತೆ ಇರುವುದರಿಂದ ತಕ್ಷಣ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಫ್ಲೋರಿಡಾ ಪರ್ಯಾಯ ದ್ವೀಪವನ್ನು ಬುಧವಾರ ತಡರಾತ್ರಿ ದಾಟಿದ ಬಳಿಕ ಚಂಡಮಾರುತ ದಕ್ಷಿಣ ಜಾರ್ಜಿಯಾ ಮತ್ತು ಕರೊಲಿನಾ ರಾಜ್ಯಗಳಿಗೆ ಗುರುವಾರ ಅಪ್ಪಳಿಸುವ ನಿರೀಕ್ಷೆಯಿದೆ. ಎರಡೂ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು ಲಭ್ಯ ಸಂಪನ್ಮೂಲ ಮತ್ತು ರಕ್ಷಣಾ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಸ್ಥಳೀಯ ಆಡಳಿತ ಘೋಷಿಸಿದೆ.