ಜಗತ್ತಿಗೆ ನಿಮ್ಮನ್ನು ರಕ್ಷಿಸಲಾಗಲಿಲ್ಲ: ಗಾಝಾ ನಿರಾಶ್ರಿತರ ಶಿಬಿರದ ಮೇಲಿನ ಬಾಂಬ್ ಸ್ಫೋಟಕ್ಕೆ ಕ್ಷಮೆ ಕೋರಿದ ಸ್ಕಾಟ್ ಲ್ಯಾಂಡ್ ಪ್ರಧಾನಿ
ಎಡಿನ್ ಬರ್ಗ್: ಹಲವರ ಸಾವಿಗೆ ಕಾರಣವಾಗಿರುವ ಗಾಝಾದ ಬೃಹತ್ ನಿರಾಶ್ರಿತ ಶಿಬಿರದ ಮೇಲಿನ ಇಸ್ರೇಲ್ ಬಾಂಬ್ ದಾಳಿಯನ್ನು ಬುಧವಾರ ಖಂಡಿಸಿರುವ ಸ್ಕಾಟ್ ಲ್ಯಾಂಡ್ ಪ್ರಧಾನಿ ಹಂಝ ಯೂಸಫ್, “ಈ ಕೃತ್ಯವು ಮಾನವೀಯತೆಗೆ ಘೋರ ಅಗೌರವ” ಎಂದು ಕಟುವಾಗಿ ಟೀಕಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸ್ಕಾಟಿಶ್ ನ್ಯಾಷನಲ್ ಪಾರ್ಟಿಯ ನಾಯಕರೂ ಆಗಿರುವ ಹಂಝ ಯೂಸಫ್, “ಜಬಾಲಿಯಾ ನಿರಾಶ್ರಿತ ಶಿಬಿರದಲ್ಲಿದ್ದ ಮುಗ್ಧ ಪುರುಷರು, ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಲು ಜಗತ್ತಿಗೆ ಸಾಧ‍್ಯವಾಗದಿರುವ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ಸಂಘಟನೆಯು ದಾಳಿ ನಡೆಸಿದ ನಂತರ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್, ಗಾಝಾ ಪ್ರದೇಶದ ಹೊರ ಹೋಗುವ ದಾರಿಗಳನ್ನೆಲ್ಲ ಸಂಪೂರ್ಣವಾಗಿ ಮುಚ್ಚಿದೆ. ಹೀಗಾಗಿ 38 ವರ್ಷದ ಹಂಝ ಯೂಸಫ್ ಅವರ ಪತ್ನಿಯ ಪೋಷಕರು ಗಾಝಾದಲ್ಲಿ ಸಿಲುಕಿಕೊಂಡಿದ್ದು, ಈ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಕದನ ವಿರಾಮ ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಮತ್ತೆ ಯಾವುದೇ ಮಕ್ಕಳು ಸಾಯಲು ಅವಕಾಶ ನೀಡಬೇಡಿ. ನಮಗೆ ತಕ್ಷಣವೇ ಕದನವಿರಾಮದ ಅಗತ್ಯವಿದೆ” ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದಾರೆ.