ಫೆಲೆಸ್ತೀನಿನ ರಫಾದ ಮೇಲಿನ ದಾಳಿ ನಿಲ್ಲಿಸುವಂತೆ ಇಸ್ರೇಲ್ ಗೆ ಅಂತರರಾಷ್ಟ್ರೀಯ ನ್ಯಾಯಾಲಯ ಆದೇಶ
ದಿ ಹೇಗ್: ಫೆಲೆಸ್ತೀನಿನ ಗಾಝಾದ ರಫಾ ನಗರದ ಮೇಲೆ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ನಿಲ್ಲಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ಶುಕ್ರವಾರ ಆದೇಶ ನೀಡಿದೆ.
ದಕ್ಷಿಣ ಆಫ್ರಿಕಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಐಸಿಜೆ ಈ ಆದೇಶ ನೀಡಿದೆ. ಇಸ್ರೇಲ್ ಸೇನೆಯು ಗಾಝಾ ಪ್ರದೇಶದ ಮೇಲೆ, ರಫಾ ನಗರದ ಮೇಲೆ, ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವಂತೆ ಆದೇಶಿಸಬೇಕು ಎಂಬ ಮನವಿಯೊಂದಿಗೆ ದಕ್ಷಿಣ ಆಫ್ರಿಕಾ ಕಳೆದ ವಾರ ಅರ್ಜಿ ಸಲ್ಲಿಸಿತ್ತು. ಜನಾಂಗೀಯ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 1948ರಲ್ಲಿ ಮಾಡಿಕೊಂಡ ಒಪ್ಪಂದವನ್ನು ಇಸ್ರೇಲ್ ಉಲ್ಲಂಘಿಸುತ್ತಿದೆ ಎಂದು ದಕ್ಷಿಣ ಆಫ್ರಿಕಾ ಆರೋಪಿಸಿತ್ತು.
ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಇಸ್ರೇಲ್ ಮಂಡಿಸಿದ್ದ ಕೋರಿಕೆಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಫೆಲೆಸ್ತೀನ್ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸುವ ಜನಾಂಗೀಯ ಹತ್ಯಾಕಾಂಡದ ಕೃತ್ಯಗಳನ್ನು ತಡೆಯಬೇಕು ಎಂದು ಇಸ್ರೇಲ್‌ಗೆ ಸೂಚಿಸಿದೆ. ಅಲ್ಲದೇ, ಮಾನವೀಯ ನೆರವಿಗೆ ಅನುಕೂಲವಾಗುವಂತೆ ರಫಾ ಕ್ರಾಸಿಂಗ್ ಅನ್ನು ತೆರೆಯಬೇಕು ಎಂದು ಒತ್ತಾಯಿಸಿದೆ.