ಪಾಕ್ ನಲ್ಲಿ ಸಕಾಲಿಕ ಚುನಾವಣೆಗೆ ಐಎಂಎಫ್ `ಗ್ಯಾರಂಟಿ' ಕೋರಿದ ಇಮ್ರಾನ್
ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿತ ಅವಧಿಯಲ್ಲೇ ನಡೆಯುವ ಬಗ್ಗೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯಿಂದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಖಾತರಿ ಕೇಳಿದ್ದಾರೆ ಎಂದು `ಜಿಯೊ ನ್ಯೂಸ್' ಚಾನೆಲ್ ಶನಿವಾರ ವರದಿ ಮಾಡಿದೆ.
ಪಾಕಿಸ್ತಾನಕ್ಕೆ ಐಎಂಎಫ್ ಘೋಷಿಸಿರುವ 3 ಶತಕೋಟಿ ಡಾಲರ್ ಸಾಲ ಒದಗಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಐಎಂಎಫ್ ಆಡಳಿತ ಮಂಡಳಿ ಜುಲೈ 12ರಂದು ನಡೆಯುವ ಸಭೆಯಲ್ಲಿ ಕೈಗೊಳ್ಳಲಿದೆ. ಅದಕ್ಕೆ ಪೂರ್ವಭಾವಿಯಾಗಿ, ಸಾಲ ಯೋಜನೆಯಡಿ ಪ್ರಮುಖ ಉದ್ದೇಶಗಳು ಮತ್ತು ನೀತಿಗಳಿಗೆ ಇಮ್ರಾನ್ ಪಕ್ಷದ ಬೆಂಬಲ ಪಡೆಯಲು ಐಎಂಎಫ್ ನ ನಿಯೋಗವು ಮಾಜಿ ಪ್ರಧಾನಿಯನ್ನು ಭೇಟಿಯಾಗಿತ್ತು.
ಅಕ್ಟೋಬರ್ನ ಲ್ಲಿ ನಿಗದಿಯಾಗಿರುವಂತೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ನೀವು ಖಾತರಿ ನೀಡುತ್ತೀರಾ ಎಂದು ಇಮ್ರಾನ್ ಖಾನ್ ಐಎಂಎಫ್ ನಿಯೋಗವನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ನಿಯೋಗವು `ಮತ್ತೊಂದು ದೇಶದ ಆಂತರಿಕ ವ್ಯವಹಾರಗಳಲ್ಲಿ ತಾವು ಹಸ್ತಕ್ಷೇಪ ನಡೆಸಲಾಗದು. ಆದರೆ ಅಧಿಕಾರದ ಪರಿವರ್ತನೆ ಸಕಾಲದಲ್ಲಿ ನಡೆಯುವ ನಿರೀಕ್ಷೆಯ ರೀತಿಯಲ್ಲಿ ಸಾಲದ ಪ್ಯಾಕೇಜನ್ನು ವಿನ್ಯಾಸಗೊಳಿಸಲಾಗಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.