ಇಂಡೊ-ಕೆನಡಿಯನ್ ಉದ್ಯಮಿಗಳ ಸುಲಿಗೆ ಪ್ರಕರಣ: ಸಮಿತಿ ರಚನೆ

Update: 2024-02-16 17:13 GMT

Photo : freepik

ಟೊರಂಟೊ: ಹೆಚ್ಚುತ್ತಿರುವ ಸುಲಿಗೆ ಪ್ರಕರಣ (ಮುಖ್ಯವಾಗಿ ಭಾರತೀಯ ಕೆನಡಿಯನ್ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು)ಗಳನ್ನು ನಿಭಾಯಿಸಲು ಕೆನಡಾದ ಕಾನೂನು ಜಾರಿ ಪ್ರಾಧಿಕಾರ ರಾಷ್ಟ್ರೀಯ ಸಮನ್ವಯ ಸಮಿತಿಯನ್ನು ರಚಿಸಿದೆ ಎಂದು ವರದಿಯಾಗಿದೆ.

ಕೆನಡಾದ್ಯಂತ ಇಂತಹ ಸುಲಿಗೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರಿಂದ, ಇಂತಹ ಪ್ರಕರಣಗಳ ತನಿಖೆಯಲ್ಲಿ ಸಮನ್ವಯ ಸಾಧಿಸಲು ಮತ್ತು ತನಿಖೆಗೆ ವೇಗ ನೀಡುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಪೊಲೀಸ್ ಇಲಾಖೆಯ ಒಕ್ಕೂಟವನ್ನು ರಚಿಸಲಾಗಿದೆ. `ರಾಷ್ಟ್ರೀಯ ಸಮನ್ವಯ ಮತ್ತು ನೆರವು ತಂಡ (ಎನ್‍ಸಿಎಸ್‍ಟಿ) ಎಂಬ ಈ ಸಮಿತಿಯು ಬ್ರಿಟಿಷ್ ಕೊಲಂಬಿಯಾ, ಆಲ್ಬರ್ಟ, ಒಂಟಾರಿಯೊ ನಗರಗಳಲ್ಲಿ ಹಾಗೂ ಹೊರಗಿನ ಪ್ರದೇಶಗಳಲ್ಲಿ ವರದಿಯಾಗುವ ಸುಲಿಗೆ ಮತ್ತು ಹಿಂಸಾಚಾರ ಪ್ರಕರಣಗಳ ತನಿಖೆಯಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಲಿದೆ ಎಂದು ಕೆನಡಾ ಪೊಲೀಸ್ ಇಲಾಖೆಯ ಹೇಳಿಕೆ ತಿಳಿಸಿದೆ.

ಸುಲಿಗೆ ಪ್ರಕರಣಗಳ ಏಕಾಏಕಿ ಉಲ್ಬಣದಲ್ಲಿ ಭಾರತದ ಗ್ಯಾಂಗ್‍ಗಳ ಕೈವಾಡವಿದೆ ಎಂಬ ವರದಿಗಳ ಬಗ್ಗೆ ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಸಮಿತಿಯು ಎಲ್ಲಾ ಸಾಮ್ಯತೆಗಳು ಹಾಗೂ ಪ್ರೇರಣೆಗಳನ್ನು ಗಮನಿಸುತ್ತಿದೆ ಮತ್ತು ಈ ಪ್ರಕರಣಗಳು ಸಂಘಟಿತ ಅಪರಾಧ ಗುಂಪುಗಳಿಗೆ ಸಂಬಂಧಿಸಿವೆ ಎಂಬ ವರದಿಯನ್ನು ಪರಿಶೀಲಿಸಲಿದೆ ಎಂದು ಸಮಿತಿಯ ಮುಖ್ಯಸ್ಥ ಆಡಮ್ ಮೆಕಿಂತೋಷ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News