ಪಾಕಿಸ್ತಾನದಲ್ಲಿ ತೀವ್ರಗೊಂಡ ರಾಜಕೀಯ ಚಟುವಟಿಕೆ ; ಸಮ್ಮಿಶ್ರ ಸರಕಾರ ರಚನೆಗೆ ಷರೀಫ್-ಭುಟ್ಟೋ ಒಲವು

Update: 2024-02-11 17:22 GMT

ಸಾಂದರ್ಭಿಕ ಚಿತ್ರ | Photo:NDTV

ಇಸ್ಲಮಾಬಾದ್ : ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ಸಂಜೆ ಆರಂಭಗೊಂಡಿದ್ದು ರವಿವಾರ ಮಧ್ಯಾಹ್ನದ ವೇಳೆಗೆ ಸಂಸತ್‍ನ 265 ಸ್ಥಾನಗಳ ಪೈಕಿ 264 ಸ್ಥಾನಗಳ ಫಲಿತಾಂಶ ಪ್ರಕಟಿಸಲಾಗಿದ್ದು ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಬೆಂಬಲಿಗ ಅಭ್ಯರ್ಥಿಗಳು 101 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅತೀ ಹೆಚ್ಚಿನ ಸ್ಥಾನ ಪಡೆದಿದ್ದಾರೆ.

ಮಾಜಿ ಪ್ರಧಾನಿ ನವಾಝ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್(ಪಿಎಂಎಲ್-ಎನ್) 75 ಸ್ಥಾನ, ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಝರ್ದಾರಿ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) 54 ಸ್ಥಾನ, ವಿಭಜನೆಯ ಸಂದರ್ಭ ಭಾರತದಿಂದ ವಲಸೆ ಹೋಗಿದ್ದ, ಉರ್ದು ಮಾತನಾಡುವ ಸಮುದಾಯದವರನ್ನು ಪ್ರತಿನಿಧಿಸುವ ಕರಾಚಿ ಮೂಲದ ಎಂಕ್ಯುಎಂ-ಪಿ ಪಕ್ಷ 17 ಸ್ಥಾನ ಗಳಿಸಿದೆ. ಪಂಜಾಬ್‍ನ ಖುಷಬ್ ಕ್ಷೇತ್ರದಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಅಭ್ಯರ್ಥಿಯ ನಿಧನದಿಂದಾಗಿ ಒಂದು ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ.

ಇಮ್ರಾನ್ ಅವರ ಪಿಟಿಐ ಪಕ್ಷದ ಅಭ್ಯರ್ಥಿಗಳು ಪಕ್ಷದ `ಬ್ಯಾಟ್' ಚಿಹ್ನೆಯಡಿ ಸ್ಪರ್ಧಿಸಲು ಅನರ್ಹಗೊಂಡಿರುವುದರಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಆದ್ದರಿಂದ ತಾಂತ್ರಿಕವಾಗಿ ಷರೀಫ್ ಅವರ ಪಿಎಂಎಲ್-ಎನ್ ಪಕ್ಷವೇ ಅತೀ ದೊಡ್ಡ ಪಕ್ಷವಾಗಿ ಗುರುತಿಸಿಕೊಳ್ಳುವುದರಿಂದ ತಮ್ಮನ್ನು ಸರಕಾರ ರಚಿಸಲು ಮೊದಲು ಆಹ್ವಾನಿಸಬೇಕು ಎಂಬುದು ಷರೀಫ್ ಅವರ ಪ್ರತಿಪಾದನೆಯಾಗಿದೆ. ಇದಕ್ಕೆ ಪೂರಕವಾಗಿ, ಭುಟ್ಟೋ ಅವರ ಪಿಪಿಪಿ ಪಕ್ಷದ ಬೆಂಬಲ ಪಡೆದು ಸಮ್ಮಿಶ್ರ ಸರಕಾರ ರಚಿಸುವ ಪ್ರಕ್ರಿಯೆಗೆ ಪಿಎಂಎಲ್-ಎನ್ ಪಕ್ಷ ಚಾಲನೆ ನೀಡಿದೆ. ಬಿಲಾವಲ್ ಭುಟ್ಟೋ ಜತೆ ಮಾತುಕತೆಗೆ ಷರೀಫ್ ತನ್ನ ಸಹೋದರ ಶಹಬಾಝ್ ಷರೀಫ್‍ರನ್ನು ನಿಯೋಜಿಸಿದ್ದಾರೆ.

ಈ ಮಧ್ಯೆ, ಪಿಟಿಐ ಪಕ್ಷದ ಅಧ್ಯಕ್ಷ ಗೋಹರ್ ಆಲಿಖಾನ್‍ರನ್ನು ಅಧ್ಯಕ್ಷ ಆರಿಫ್ ಆಲಿ ಸರಕಾರ ರಚನೆಗೆ ಆಹ್ವಾನಿಸಬೇಕು ಎಂದು ಪಿಟಿಐ ಪಕ್ಷ ಆಗ್ರಹಿಸಿದೆ. ಚುನಾವಣೆಯಲ್ಲಿ ಹಾಗೂ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪಿಟಿಐ ಪಕ್ಷದ ಕಾರ್ಯಕರ್ತರು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಪಿಟಿಐ ಪಕ್ಷದ ಮುಖಂಡರು ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಇಸ್ಲಮಾಬಾದ್ ಮತ್ತು ಲಾಹೋರ್ ನಲ್ಲಿ ಸರಣಿ ಸಭೆ ನಡೆಸಿದ್ದು, ಪಿಟಿಐ ಪಕ್ಷಕ್ಕೆ ಸರಕಾರ ರಚನೆಗೆ ಆಹ್ವಾನ ನೀಡುವಂತೆ ಆಗ್ರಹಿಸಿ ಮತ್ತು ಪಕ್ಷದ ಮತಗಳನ್ನು ಕದಿಯಲಾಗಿದೆ ಎಂದು ಆರೋಪಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮೂರು ಪ್ರಾಂತೀಯ ಅಸೆಂಬ್ಲಿಯ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ಪಂಜಾಬ್‍ನಲ್ಲಿ 296 ಕ್ಷೇತ್ರಗಳಲ್ಲಿ ಪಿಟಿಐ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು 138 ಸ್ಥಾನ, ಪಿಎಂಎಲ್-ಎನ್ ಪಕ್ಷ 137 ಮತ್ತು ಇತರ ಪಕ್ಷಗಳು 21 ಸ್ಥಾನ ಗಳಿಸಿವೆ. ಸಿಂಧ್ ಪ್ರಾಂತದಲ್ಲಿ ಚುನಾವಣೆ ನಡೆದ 130 ಕ್ಷೇತ್ರಗಳಲ್ಲಿ 129 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ, ಖೈಬರ್ ಪಖ್ತೂಂಕ್ವಾದಲ್ಲಿ 112 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ.

ಚುನಾವಣಾ ಆಯುಕ್ತರ ರಾಜೀನಾಮೆಗೆ ಪಿಟಿಐ ಒತ್ತಾಯ

ಗುರುವಾರ ನಡೆದ ಚುನಾವಣೆಯಲ್ಲಿ ಸಾಂವಿಧಾನಿಕ ಉಲ್ಲಂಘನೆಯ ಕಾರಣಕ್ಕೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸಿಕಂದರ್ ಸುಲ್ತಾನ್ ರಾಜಾ ಹಾಗೂ ಪಾಕಿಸ್ತಾನದ ಚುನಾವಣಾ ಆಯೋಗ ತಕ್ಷಣ ರಾಜೀನಾಮೆ ನೀಡಬೇಕೆಂದು ಪಿಟಿಐ ಪಕ್ಷ ಆಗ್ರಹಿಸಿರುವುದಾಗಿ ಎಆರ್‍ವೈ ನ್ಯೂಸ್ ವರದಿ ಮಾಡಿದೆ. ತಮಗೆ ಬಿದ್ದಿರುವ ಮತಗಳನ್ನು ಅನ್ಯಾಯವಾಗಿ ಅಸಿಂಧುಗೊಳಿಸಿ ತಮ್ಮನ್ನು ಸೋಲಿಸಲಾಗಿದೆ ಎಂದು ದೂರಿ ಇಮ್ರಾನ್ ಪಕ್ಷದ ಕೆಲವು ಪಕ್ಷೇತರ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಹಲವು ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News