ಐರ್ಲ್ಯಾಂಡ್: ಬಾಲಕಿ ಸಹಿತ ಮೂವರಿಗೆ ಇರಿತ, ಡಬ್ಲಿನ್ನಲ್ಲಿ ಉದ್ರಿಕ್ತ ಜನರಿಂದ ಹಿಂಸಾಚಾರ
ಡಬ್ಲಿನ್: ಐರ್ಲ್ಯಾಂಡ್ ರಾಜಧಾನಿ ಡಬ್ಲಿನ್ ನಗರದಲ್ಲಿ ಗುರುವಾರ ಸಂಜೆ ಭೀಕರ ಹಿಂಸಾಚಾರ ಭುಗಿಲೆದ್ದಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಹಾಗೂ ಗಲಭೆ ನಿಗ್ರಹ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ. ಐದು ವರ್ಷದ ಬಾಲಕಿ, ಓರ್ವ ಮಹಿಳೆ ಹಾಗೂ ಇನ್ನಿಬ್ಬರು ಸಣ್ಣ ಮಕ್ಕಳ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ ಬೆನ್ನಲ್ಲೇ ಗಲಭೆ ಸ್ಫೋಟಿಸಿತ್ತು.
ಚೂರಿ ಇರಿತದಿಂದಾಗಿ ಗಂಭೀರ ಗಾಯಗೊಂಡ ಬಾಲಕಿಯು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾಳೆ. ಇರಿತದ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ನೂರಾರು ಜನರು ಮುಖಗಳಿಗೆ ಮಾಸ್ಕ್ ಧರಿಸಿ ರಾಡ್ಗಳನ್ನು ಹಿಡಿದು ಬೀದಿಗಿಳಿದು ಹಿಂಸಾಚಾರ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಗಲಭೆಯನ್ನು ನಿಗ್ರಹಿಸಲು 400 ಕ್ಕೂ ಅಧಿಕ ಪೊಲೀಸರನ್ನು ಡಬ್ಲಿನ್ನಲ್ಲಿ ನಿಯೋಜಿಸಲಾಗಿದೆ. ಈ ಮಧ್ಯೆ ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆಯಾಗಿ ಐರ್ಲ್ಯಾಂಡ್ನ ಸಂಸತ್ಕಟ್ಟಡದ ಸುತ್ತಲೂ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ.
ಬಾಲಕಿ ಸೇರಿದಂತೆ ಮೂವರಿಗೆ ಇರಿತದ ಘಟನೆಯನ್ನು ಪ್ರತಿಭಟಿಸಿ ಹಿಂಸಾಚಾರಕ್ಕಿಳಿದ ಜನರು ರಸ್ತೆಗಳಲ್ಲಿ ಟಯರ್ಗಳಿಗೆ ಬೆಂಕಿ ಹಚ್ಚಿದ್ದಾರೆ.ಆಸುಪಾಸಿನ ಬಾರ್ ಹಾಗೂ ರೆಸ್ಟಾರೆಂಟ್ಗಲಿಗೂ ನುಗ್ಗಿದ ಗಲಭೆ ನಿರತರು ಕುರ್ಚಿ, ಮೇಜುಗಳನ್ನು ಎಳೆದಾಡಿದ್ದಾರೆ. ಅಂಗಡಿಗಳ ಕಿಟಕಿಗಳಿಗೆ ಹಿಂಸಾನಿರತರು ಕಲ್ಲೆಸೆದು ಗಾಜುಗಳನ್ನು ಪುಡಿಗೈದಿದ್ದಾರೆ. ನಗರಾದ್ಯಂತ ಟ್ರ್ಯಾಮ್ಗಳು ಹಾಗೂ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಹಲವಾರು ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಶುಕ್ರವಾರದಂದು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.ಸಾರ್ವಜನಿಕರು ಯಾವುದೇ ವದಂತಿಗಳಿಗೆ ಮರುಳಾಗದೆ ಶಾಂತಿ ಪಾಲಿಸುವಂತೆ ಪೊಲೀಸರು ಕರೆ ನೀಡಿದ್ದಾರೆ.
ಇರಿತದ ಪ್ರಕರಣಕ್ಕೆ ಸಂಬಂಂಧಿಸಿ 50ರ ಹರೆಯದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಹಲ್ಲೆಯಿಂದ ಆತನಿಗೂ ಗಂಭೀರ ಗಾಯಗಳಾಗಿರುವುದಾಗಿ ಅವರು ಹೇಳಿದ್ದಾರೆ. ಶಂಕಿತ ದಾಳಿಕೋರನ ರಾಷ್ಟ್ರೀಯತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡಿದ್ದುದು ಹಿಂಸಾಚಾರದ ಬೆಂಕಿಗೆ ತುಪ್ಪಸುರಿಯಿತು ಎನ್ನಲಾಗಿದೆ.
ಬಲಪಂಥೀಯರೇ ಅಧಿಕ ಸಂಖ್ಯೆಯಲ್ಲಿ ಜನರ ಗುಂಪೊಂದು ಐರಿಶ್ ಲಿವ್ಸ್ ಮ್ಯಾಟರ್ ಎಂಬ ಬ್ಯಾನರ್ಗಳನ್ನು ಹಿಡಿದುಕೊಂಡು ವಲಸಿಗ ಸಮುದಾಯವವರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿದರೆಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಇರಿತದ ಕೃತ್ಯಕ್ಕೆ ಭಯೋತ್ಪಾದಕ ಗುಂಪಿನ ನಂಟಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಐರ್ಲ್ಯಾಂಡ್ನ ನ್ಯಾಯಾಂಗ ಸಚಿವ ಹೆಲೆನ್ ಮ್ಯಾಕೆಂಟಿ ತಿಳಿಸಿದ್ದಾರೆ.
ಶಂಕಿತ ಆರೋಪಿಯು ಡಬ್ಲಿನ್ನ ಪಾರ್ನೆಲ್ ಸ್ಕ್ವಾರ್ ಈಸ್ಟ್ ಪ್ರದೇಶದಲ್ಲಿ ಹಲವಾರು ಮಂದಿಯನ್ನು ಇರಿದಿದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸ್ ಅಧೀಕ್ಷಕ ಲಿಯಾಮ್ ಗೆರಾಗ್ಟಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಲಭೆಗೆ ಐರ್ಲ್ಯಾಂಡ್ ಪ್ರಧಾನಿ ಖಂಡನೆ
ಬಾಲಕಿ ಸೇರಿದಂತೆ ಮೂವರಿಗೆ ದುಷ್ಕರ್ಮಿಯೊಬ್ಬ ಇರಿದ ಘಟನೆಯ ಬಳಿಕ ಡಬ್ಲಿನ್ನಲ್ಲಿ ಹಿಂಸಾಚಾರ ಭುಗಿಲೆದ್ದಿರುವುದನ್ನು ಐರ್ಲ್ಯಾಂಡ್ ಪ್ರಧಾನಿ ಲಿಯೊ ವರಾಡ್ಕರ್ ಖಂಡಿಸಿದ್ದಾರೆ. ಗಲಭೆಕೋರರು ದೇಶಕ್ಕೆ ಕಳಂಕವನ್ನು ತಂದಿದ್ದಾರೆ ಎಂದವರು ಹೇಳಿದ್ದಾರೆ. ಬಲಪಂಥೀಯ ವಿಚಾರಧಾರೆಯಿಂದ ಪ್ರೇರಿತರಾದ ಮಾನಸಿಕ ಅಸ್ವಸ್ಥರ ಗುಂಪೊಂದು ಈ ಹಿಂಸಾಚಾರವನ್ನು ಎಸಗಿದೆಯೆಂದು ಡಬ್ಲಿನ್ನ ಪೊಲೀಸ್ ವರಿಷ್ಠ ಡ್ರ್ಯೂ ಹ್ಯಾರಿಸ್ ಆರೋಪಿಸಿದ್ದಾರೆ. ತಪ್ಪುಮಾಹಿತಿಯನ್ನು ಹರಡುವವರ ವಿರುದ್ಧ ತೀವ್ರವಾದ ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.