ಕದನ ವಿರಾಮ | ಅಮೆರಿಕದ ಪ್ರಸ್ತಾವನೆಗೆ ಇಸ್ರೇಲ್ ಸಮ್ಮತಿ

Update: 2024-08-20 16:08 GMT

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ 

ವಾಷಿಂಗ್ಟನ್ : ಗಾಝಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಎದುರಾಗಿರುವ ಭಿನ್ನಮತವನ್ನು ನಿವಾರಿಸಲು ಅಮೆರಿಕ ಮುಂದಿರಿಸಿದ ಪ್ರಸ್ತಾಪವನ್ನು ಇಸ್ರೇಲ್ ಒಪ್ಪಿಕೊಂಡಿದೆ. ಹಮಾಸ್ ಕೂಡಾ ಒಪ್ಪಲಿ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಆಗ್ರಹಿಸಿದ್ದಾರೆ.

ಹಮಾಸ್ ಮತ್ತು ಇಸ್ರೇಲ್ ನಿಲುವಿನ ನಡುವಿನ ಅಂತರವನ್ನು ಮುಚ್ಚಲು ಅಮೆರಿಕ ಮುಂದಿರಿಸಿದ ಹೊಸ ಪ್ರಸ್ತಾಪಕ್ಕೆ ಸಂಬಂಧಿಸಿ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್, ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ನಡೆಸಿದ ಮಾತುಕತೆ ಬಹಳ ರಚನಾತ್ಮಕವಾಗಿತ್ತು. ತಾನು ಹೊಸ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಮತ್ತು ಅದನ್ನು ಬೆಂಬಲಿಸುವುದಾಗಿ ನೆತನ್ಯಾಹು ದೃಢಪಡಿಸಿದ್ದಾರೆ. ಇದೀಗ ಇದೇ ರೀತಿ ಮಾಡುವುದು ಹಮಾಸ್ ಜವಾಬ್ದಾರಿಯಾಗಿದೆ. ಬಳಿಕ ಯುದ್ಧಕ್ಕೆ ಸಂಬಂಧಿಸಿದ ಪಕ್ಷಗಳು (ಮಧ್ಯವರ್ತಿಗಳಾದ ಅಮೆರಿಕ, ಈಜಿಪ್ಟ್ ಮತ್ತು ಖತರ್ ನೆರವಿನಿಂದ) ಈ ಒಪ್ಪಂದದ ಅಡಿಯಲ್ಲಿ ಅವರು ಮಾಡಿದ ಬದ್ಧತೆಗಳನ್ನು ಹೇಗೆ ಕಾರ್ಯಗತಗೊಳಿಸುತ್ತಾರೆ ಎಂಬುದರ ಕುರಿತು ಸ್ಪಷ್ಟ ತಿಳುವಳಿಕೆಯನ್ನು ತಲುಪುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಬ್ಲಿಂಕೆನ್ ಹೇಳಿದ್ದಾರೆ. ಬ್ಲಿಂಕೆನ್ ಜತೆಗೆ ನಡೆಸಿದ ಸಭೆ ಧನಾತ್ಮಕವಾಗಿತ್ತು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.

ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಕುರಿತು ಖತರ್ ನಲ್ಲಿ ಕಳೆದ ವಾರ ನಡೆದಿದ್ದ ಮಾತುಕತೆಯಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿರಲಿಲ್ಲ. ಇಸ್ರೇಲ್ ಮತ್ತು ಹಮಾಸ್ ನಡುವಿನ ಅಂತರವನ್ನು ಮುಚ್ಚಲು ಅಮೆರಿಕ ಮುಂದಿರಿಸಿದ ಪ್ರಸ್ತಾವನೆಯ ಬಗ್ಗೆ ಸಹಮತ ಮೂಡಿಸುವ ಉದ್ದೇಶದಿಂದ ಬ್ಲಿಂಕೆನ್ ವ್ಯಾಪಕ ಪ್ರಯತ್ನ ಮುಂದುವರಿಸಿದ್ದು ಇಸ್ರೇಲ್ ಭೇಟಿಯ ಬಳಿಕ ಮಂಗಳವಾರ ಈಜಿಪ್ಟ್‍ಗೆ ಆಗಮಿಸಿದ್ದಾರೆ.

ಗಾಝಾದಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ತಾನು ಒಪ್ಪುವುದಿಲ್ಲ. ಕದನ ವಿರಾಮ ಶಾಶ್ವತವಾಗಿರಬೇಕು ಎಂದು ಹಮಾಸ್ ಆಗ್ರಹಿಸಿದ್ದರೆ, ಹಮಾಸ್ ನ ಮಿಲಿಟರಿ ಮತ್ತು ರಾಜಕೀಯ ಬಲವನ್ನು ನಾಶಗೊಳಿಸುವ ತನಕ ಯುದ್ಧ ನಿಲ್ಲುವುದಿಲ್ಲ ಎಂದು ಇಸ್ರೇಲ್ ಪಟ್ಟುಹಿಡಿದಿದೆ. ಗಾಝಾದಲ್ಲಿ, ವಿಶೇಷವಾಗಿ ಈಜಿಪ್ಟ್ ನ ಗಡಿಯುದ್ದಕ್ಕೂ ಇಸ್ರೇಲ್‍ನ ಮುಂದುವರಿದ ಮಿಲಿಟರಿ ಉಪಸ್ಥಿತಿಯ ಬಗ್ಗೆ, ಗಾಝಾ ಪ್ರದೇಶದೊಳಗೆ ಫೆಲೆಸ್ತೀನೀಯಾದವರ ಮುಕ್ತ ಚಲನೆಯ ಬಗ್ಗೆ ಮತ್ತು ಕೈದಿಗಳ ವಿನಿಮಯದಲ್ಲಿ ಬಿಡುಗಡೆಯಾಗುವವರ ಸಂಖ್ಯೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ.

ಸಮಸ್ಯೆಗಳಿವೆ. ಸವಾಲುಗಳೂ ಇವೆ. ಒಂದು ವೇಳೆ ಹಮಾಸ್ ಕೂಡಾ ಅಮೆರಿಕದ ಹೊಸ ಪ್ರಸ್ತಾವನೆಗೆ ಸಮ್ಮತಿಸಿದರೂ, ಒಪ್ಪಂದ ಅನುಷ್ಟಾನದ ಬಗ್ಗೆ ಸಂಬಂಧಿಸಿದ ಪಕ್ಷಗಳ ಬದ್ಧತೆ, ಒಪ್ಪಂದವನ್ನು ಅವರು ಯಾವ ರೀತಿ ಅನುಷ್ಟಾನಗೊಳಿಸುತ್ತಾರೆ ಎಂಬ ಬಗ್ಗೆಯೂ ಪ್ರಶ್ನೆಗಳಿವೆ. ಇವು ಸಂಕೀರ್ಣ ವಿಷಯಗಳು. ಆದರೆ ಅದಕ್ಕಾಗಿಯೇ ನಾವು ಪರಿಣಿತ ಸಂಧಾನಕಾರರನ್ನು ಹೊಂದಿದ್ದೇವೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರಧಾನಿ ನೆತನ್ಯಾಹು ತಮ್ಮ ಹಿರಿಯ ತಜ್ಞರ ತಂಡವನ್ನು ಖತರ್ ಅಥವಾ ಈಜಿಪ್ಟ್ ಗೆ ಕಳುಹಿಸಲು ಬದ್ಧರಾಗಿದ್ದಾರೆ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಈ ಮಧ್ಯೆ, ಕದನ ವಿರಾಮ ಮಾತುಕತೆಯಲ್ಲಿ ಅಮೆರಿಕವು ಇಸ್ರೇಲ್ ಪರವಾಗಿದೆ. ಬ್ಲಿಂಕೆನ್ ಅವರು ನೆತನ್ಯಾಹು ಸರಕಾರದ ಮಂತ್ರಿಯಂತೆ ವರ್ತಿಸುತ್ತಿದ್ದಾರೆ ಎಂದು ಹಮಾಸ್ ಮುಖಂಡರು ಆರೋಪಿಸಿದ್ದಾರೆ.

► ಅಮೆರಿಕದ ಪ್ರಸ್ತಾಪಕ್ಕೆ ಹಮಾಸ್ ಟೀಕೆ

ಅಮೆರಿಕ ಮುಂದಿರಿಸಿದ ಹೊಸ ಪ್ರಸ್ತಾಪವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವೀಕರಿಸಿದ್ದಾರೆ ಎಂಬ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಹೇಳಿಕೆಯನ್ನು ಹಮಾಸ್ ನ ಹಿರಿಯ ಅಧಿಕಾರಿ ಒಸಾಮಾ ಹಮ್ದನ್ ಟೀಕಿಸಿದ್ದಾರೆ.

ಇದು ಅನೇಕ ದ್ವಂದಾರ್ಥತೆಗಳನ್ನು ಹುಟ್ಟುಹಾಕಿದೆ. ಏಕೆಂದರೆ ಅದು(ಹೊಸ ಪ್ರಸ್ತಾಪ) ನಮ್ಮೆದುರು ಪ್ರಸ್ತುತಪಡಿಸಿದ ವಿಷಯವಲ್ಲ ಅಥವಾ ನಾವು ಒಪ್ಪಿದ ವಿಷಯವಲ್ಲ. ನಮಗೆ ಹೊಸ ಗಾಝಾ ಕದನ ವಿರಾಮ ಮಾತುಕತೆಯ ಅಗತ್ಯವಿಲ್ಲ. ಅನುಷ್ಟಾನ ಕಾರ್ಯವಿಧಾನದ ಬಗ್ಗೆ ಒಪ್ಪಂದಕ್ಕೆ ಬರಬೇಕಾಗಿದೆ ಎಂಬುದನ್ನು ಈಗಾಗಲೇ ಮಧ್ಯವರ್ತಿಗಳಿಗೆ ಸ್ಪಷ್ಟಪಡಿಸಿದ್ದೇವೆ ಎಂದು ಹಮ್ದನ್ ರ ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

► ಈಜಿಪ್ಟ್ ಗೆ ಆಗಮಿಸಿದ ಬ್ಲಿಂಕೆನ್

ಸುಮಾರು 10 ತಿಂಗಳಿಂದ ಮುಂದುವರಿದಿರುವ ಗಾಝಾ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದ ಕದನ ವಿರಾಮ ಮಾತುಕತೆಯಲ್ಲಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಮಂಗಳವಾರ ಈಜಿಪ್ಟ್ ತಲುಪಿದ್ದಾರೆ.

ಈಜಿಪ್ಟ್ ನ ಕರಾವಳಿ ನಗರ ಎಲ್ ಅಲಮೈನ್‍ನಲ್ಲಿ ಈಜಿಪ್ಟ್ ಅಧ್ಯಕ್ಷರು ಹಾಗೂ ವಿದೇಶಾಂಗ ಸಚಿವರ ಜತೆ ಸಭೆ ನಡೆಸಿದ ಬಳಿಕ ಅವರು ಖತರ್‍ಗೆ ತೆರಳಿ ದೋಹಾದಲ್ಲಿ ಖತರ್ ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಜತೆ ಮಾತುಕತೆ ನಡೆಸಲಿದ್ದಾರೆ. ಗಾಝಾ ಕದನ ವಿರಾಮ ಮಾತುಕತೆಯಲ್ಲಿ ಅಮೆರಿಕದ ಜತೆ ಖತರ್ ಮತ್ತು ಈಜಿಪ್ಟ್ ಮಧ್ಯವರ್ತಿಗಳಾಗಿ ಸಹಕರಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News