ಹೊಸ ಮಾರ್ಗಸೂಚಿಗೆ ಇಸ್ರೇಲ್ ಯುದ್ಧಸಂಪುಟ ಅನುಮೋದನೆ
ಟೆಲ್ಅವೀವ್ : ಹಮಾಸ್ ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಇಸ್ರೇಲಿ ಸಮಾಲೋಚಕರಿಗೆ ಹೊಸ ಮಾರ್ಗಸೂಚಿಗಳನ್ನು ಇಸ್ರೇಲ್ ಯುದ್ಧಸಂಪುಟ ಅನುಮೋದಿಸಿದೆ.
ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ನ ಸೇನಾನೆಲೆಯ ಮೇಲೆ ದಾಳಿ ನಡೆಸಿದ್ದ ಹಮಾಸ್ ಐವರು ಮಹಿಳಾ ಯೋಧರನ್ನು ಅಪಹರಿಸುವ ಭಯಾನಕ ವೀಡಿಯೊವನ್ನು ಒತ್ತೆಯಾಳುಗಳ ಕುಟುಂಬದವರು ಬುಧವಾರ ಬಿಡುಗಡೆಗೊಳಿಸಿದ್ದರು. ಇನ್ನೂ ಹಮಾಸ್ನ ಒತ್ತೆಸೆರೆಯಲ್ಲಿ ಇರುವವರ ಬಿಡುಗಡೆಗೆ ತುರ್ತು ಕಾರ್ಯನಿರ್ವಹಿಸುವಂತೆ ಎಚ್ಚರಿಸಲು ವೀಡಿಯೊ ಬಿಡುಗಡೆ ಮಾಡಿರುವುದಾಗಿ ಹೇಳಿದ್ದರು.
ಈ ವೀಡಿಯೊ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು `ಇಂತಹ ಕೃತ್ಯ ಮತ್ತೆ ಎಂದಿಗೂ ಸಂಭವಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಮಾಸ್ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಒತ್ತೆಯಾಳುಗಳ ವಾಪಸಾತಿಗಾಗಿ ಮಾತುಕತೆ ಮುಂದುವರಿಸಲು ಯುದ್ಧ ಕ್ಯಾಬಿನೆಟ್ ಇಸ್ರೇಲ್ ಸಮಾಲೋಚನಾ ತಂಡವನ್ನು ಕೇಳಿದೆʼ ಎಂದು ಪ್ರಧಾನಿ ಕಚೇರಿ ಹೇಳಿದೆ.