ಗಾಝಾ ಶಾಲೆಯ ಮೇಲೆ ಇಸ್ರೇಲ್ ದಾಳಿ | 7 ಫೆಲೆಸ್ತೀನೀಯರ ಮೃತ್ಯು
Update: 2024-12-14 16:19 GMT
ಗಾಝಾ: ಗಾಝಾ ನಗರದಲ್ಲಿ ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 7 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 12 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಮೃತರಲ್ಲಿ ತಾಯಿ ಮತ್ತು ಮಗು ಸೇರಿದ್ದಾರೆ. ಹಮಾಸ್‍ನ ಎಷ್ಟು ಸದಸ್ಯರು ಮೃತಪಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ. ವರದಿಯನ್ನು ಪರಿಶೀಲಿಸುವುದಾಗಿ ಇಸ್ರೇಲ್ ಮಿಲಿಟರಿಯ ವಕ್ತಾರರು ಹೇಳಿದ್ದಾರೆ. ಗಾಝಾ ನಗರದಲ್ಲಿರುವ ಶಾಲೆಯ ಕಂಪೌಂಡ್‍ನ ಒಳಗೆ ಕಾರ್ಯಾಚರಿಸುತ್ತಿರುವ ಹಮಾಸ್ ಸಶಸ್ತ್ರ ಹೋರಾಟಗಾರರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ನಾಗರಿಕರ ಸಾವು-ನೋವಿನ ಪ್ರಮಾಣವನ್ನು ಕನಿಷ್ಠಗೊಳಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.