ಗಾಝಾದ ಸುರಂಗಗಳಿಗೆ ಸಮುದ್ರನೀರು ಪಂಪ್ ಮಾಡುತ್ತಿರುವ ಇಸ್ರೇಲ್

Update: 2023-12-13 17:47 GMT

ಸಾಂದರ್ಭಿಕ ಚಿತ್ರ | Photo: NDTV

ಗಾಝಾ: ಗಾಝಾ ಪಟ್ಟಿಯಲ್ಲಿರುವ ಹಮಾಸ್‍ನ ಸುರಂಗಗಳಿಗೆ ಸಮುದ್ರದ ನೀರು ಹಾಯಿಸುವುದನ್ನು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಆರಂಭಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ವಾಲ್‍ಸ್ಟ್ರೀಟ್ ಜರ್ನಲ್' ಬುಧವಾರ ವರದಿ ಮಾಡಿದೆ.

ಸುರಂಗಗಳನ್ನು ಹಮಾಸ್ ತನ್ನ ಸೇನಾನೆಲೆಯಾಗಿ ಬಳಸಿಕೊಳ್ಳುತ್ತಿದ್ದು ಇಲ್ಲಿ ಹಮಾಸ್‍ನ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳನ್ನು ದಾಸ್ತಾನು ಇರಿಸಲಾಗಿದೆ. ಇಲ್ಲಿಂದ ಇಸ್ರೇಲ್ ಸೇನೆಯ ಮೇಲೆ ದಾಳಿ ಮಾಡುತ್ತಿದೆ. ಆದ್ದರಿಂದ ನೆಲದಡಿಯಲ್ಲಿರುವ ಹಮಾಸ್‍ನ ಮೂಲಸೌಕರ್ಯವನ್ನು ಧ್ವಂಸಗೊಳಿಸುವ ಅಗತ್ಯವಿದ್ದು ಮೆಡಿಟರೇನಿಯನ್ ಸಮುದ್ರದಿಂದ ನೀರನ್ನು ಪಂಪ್ ಮಾಡಲಾಗುತ್ತಿದೆ ಎಂದು ಐಡಿಎಫ್ ಹೇಳಿದೆ.

ಆದರೆ ಈ ಸುರಂಗಗಳಲ್ಲಿ ಇನ್ನೂ ಸುಮಾರು 100ರಷ್ಟು ಒತ್ತೆಯಾಳುಗಳಿದ್ದಾರೆ ಎಂದು ಊಹಿಸಲಾಗಿದ್ದು ಸಮುದ್ರದ ನೀರು ಹಾಯಿಸುವ ನಿರ್ಧಾರದ ಬಗ್ಗೆ ಒತ್ತೆಯಾಳುಗಳ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಮಂಗಳವಾರ ಗಾಝಾ ಪಟ್ಟಿಯಲ್ಲಿ ನಡೆದ ಸಂಘರ್ಷದಲ್ಲಿ ತನ್ನ 10 ಯೋಧರು ಮೃತಪಟ್ಟಿದ್ದು ಸಂಘರ್ಷ ಆರಂಭಗೊಂಡಂದಿನಿಂದ ಮೃತಪಟ್ಟ ಯೋಧರ ಸಂಖ್ಯೆ 115ಕ್ಕೆ ಏರಿದೆ. ಆಕ್ರಮಿತ ಪಶ್ಚಿಮದಂಡೆಯಲ್ಲಿನ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ತನ್ನ ಪಡೆ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಇಸ್ರೇಲ್ ಹೇಳಿದೆ.

ಈ ಮಧ್ಯೆ, ಗಾಝಾದಲ್ಲಿ ವ್ಯಾಪಕವಾದ ವಿನಾಶಗಳ ವರದಿಯ ಹಿನ್ನೆಲೆಯಲ್ಲಿ ಅತ್ಯಂತ ಎಚ್ಚರಿಕೆ ವಹಿಸುವಂತೆ ಅಮೆರಿಕ ಇಸ್ರೇಲ್‍ಗೆ ಸಲಹೆ ನೀಡಿದೆ. ಶ್ವೇತಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ` ಇಡೀ ಪ್ರಪಂಚದ ಸಾರ್ವಜನಿಕ ಅಭಿಪ್ರಾಯ ರಾತ್ರೋರಾತ್ರಿ ಬದಲಾಗಬಹುದು. ನಾವು, ಅವರು(ಇಸ್ರೇಲ್) ತುಂಬಾ ಎಚ್ಚರಿಕೆ ವಹಿಸಬೇಕು' ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News