ಗಾಝಾದ ಸಾವಿರಾರು ಕಾರ್ಮಿಕರನ್ನು ಗಡೀಪಾರು ಮಾಡಿದ ಇಸ್ರೇಲ್
ಜೆರುಸಲೇಂ: ಹಮಾಸ್ ಜತೆಗಿನ ಯುದ್ಧ ಆರಂಭವಾದಂದಿನಿಂದ ಇಸ್ರೇಲ್‍ನೊಳಗೆ ಸಿಲುಕಿಕೊಂಡಿದ್ದ ಸಾವಿರಾರು ಫೆಲೆಸ್ತೀನಿಯನ್ ಕಾರ್ಮಿಕರನ್ನು ಶುಕ್ರವಾರ ಗಾಝಾಕ್ಕೆ ವಾಪಾಸು ಕಳುಹಿಸಲಾಗಿದೆ ಎಂದು ಗಾಝಾ ಗಡಿಯ ಅಧಿಕಾರಿಗಳು ಹೇಳಿದ್ದಾರೆ.
`ಅಕ್ಟೋಬರ್ 7ರಿಂದ ಇಸ್ರೇಲ್‍ನಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಕಾರ್ಮಿಕರನ್ನು ಮರಳಿ ಕರೆತರಲಾಗಿದೆ ಎಂದು ಗಾಝಾದ ಗಡಿದಾಟು ಪ್ರಾಧಿಕಾರದ ಮುಖ್ಯಸ್ಥ ಹಿಷಾಮ್ ಅದ್ವಾನ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಸಾಮಾನ್ಯವಾಗಿ ಸರಕು ಸಾಗಣೆಗೆ ಮಾತ್ರ ಬಳಕೆಯಾಗುವ, ಇಸ್ರೇಲ್ ಮತ್ತು ದಕ್ಷಿಣ ಗಾಝಾದ ನಡುವಿನ ಕರೀಮ್ ಅಬುಸಲೇಮ್ ಕ್ರಾಸಿಂಗ್(ಗಡಿ ದಾಟುವ ಸ್ಥಳ) ಮೂಲಕ ಕಾರ್ಮಿಕರ ಗುಂಪೊಂದು ಗಾಝಾಕ್ಕೆ ಆಗಮಿಸುವ ವೀಡಿಯೊವನ್ನು ಎಎಫ್‍ಪಿ ಟಿವಿ ಪ್ರಸಾರ ಮಾಡಿದೆ.
`ಫೆಲೆಸ್ತೀನಿಯನ್ ಕಾರ್ಮಿಕರನ್ನು ಮರಳಿ ಗಾಝಾಕ್ಕೆ ಗಡೀಪಾರು ಮಾಡಲು ಪ್ರಾರಂಭಿಸುವುದಾಗಿ ಇಸ್ರೇಲ್ ಗುರುವಾರ ಹೇಳಿತ್ತು. `ಗಾಝಾದೊಂದಿಗಿನ ಎಲ್ಲಾ ಸಂಪರ್ಕವನ್ನೂ ಕಡಿದುಕೊಳ್ಳಲಾಗುವುದು. ಗಾಝಾದ ಯಾವುದೇ ಫೆಲೆಸ್ತೀನಿ ಕಾರ್ಮಿಕರು ಇಸ್ರೇಲ್‍ನಲ್ಲಿ ಇರಲು ಅವಕಾಶವಿಲ್ಲ. ಯುದ್ಧ ಆರಂಭಗೊಂಡ ಸಂದರ್ಭ ಇಸ್ರೇಲ್‍ನಲ್ಲಿದ್ದ ಗಾಝಾದ ಕಾರ್ಮಿಕರನ್ನು ಗಡೀಪಾರು ಮಾಡಲಾಗುವುದು ' ಎಂದು ಇಸ್ರೇಲ್‍ನ ಭದ್ರತಾ ಸಚಿವಾಲಯ ಘೋಷಿಸಿತ್ತು.
ಯುದ್ಧ ಆರಂಭಗೊಳ್ಳುವುದಕ್ಕೂ ಮುನ್ನ ಸುಮಾರು 18,500 ಗಾಝಾ ಪ್ರಜೆಗಳು ಇಸ್ರೇಲಿ ವರ್ಕ್ ಪರ್ಮಿಟ್(ಇಸ್ರೇಲ್‍ನಲ್ಲಿ ಕೆಲಸ ಮಾಡುವ ಪರವಾನಿಗೆ) ಹೊಂದಿದ್ದರು ಎಂದು ಫೆಲೆಸ್ತೀನಿಯನ್ ನಾಗರಿಕ ವ್ಯವಹಾರಗಳಿಗೆ ಸಂಬಂಧಿಸಿದ ಇಸ್ರೇಲಿ ರಕ್ಷಣಾ ಏಜೆನ್ಸಿ `ಕೊಗಾಟ್' ಮಾಹಿತಿ ನೀಡಿದೆ.