ಹಸಿವನ್ನು ಯುದ್ಧಾಸ್ತ್ರವಾಗಿ ಬಳಸುತ್ತಿರುವ ಇಸ್ರೇಲ್: ವಿಶ್ವಸಂಸ್ಥೆ ಕಳವಳ
ಜಿನೆವಾ: ಯುದ್ಧದಿಂದ ಧ್ವಂಸಗೊಂಡ ಗಾಝಾಕ್ಕೆ ನೆರವು ಒದಗಿಸುವುದಕ್ಕೆ ಇಸ್ರೇಲ್‍ನ ತೀವ್ರ ನಿರ್ಬಂಧ ಮತ್ತು ಅದು ನಡೆಸುತ್ತಿರುವ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುವ ಮೂಲಕ ಇಸ್ರೇಲ್ ಯುದ್ಧಾಪರಾಧ ಎಸಗುತ್ತಿದೆ ಎಂದು ಎಚ್ಚರಿಕೆ ನೀಡಿದೆ.
ಗಾಝಾದಲ್ಲಿ ಆಹಾರದ ಕೊರತೆ ತೀವ್ರಗೊಂಡಿದ್ದು ಬರಗಾಲದ ಛಾಯೆ ಆವರಿಸಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಖಂಡಿಸಿದ್ದಾರೆ.
`ಹಸಿವು, ಆಹಾರದ ಕೊರತೆ ಮತ್ತು ಬರಗಾಲವು ಮಾನವೀಯ ನೆರವು ಮತ್ತು ವಾಣಿಜ್ಯ ಸರಕುಗಳ ಪ್ರವೇಶ ಮತ್ತು ವಿತರಣೆಗೆ ಇಸ್ರೇಲ್ ವಿಧಿಸಿರುವ ನಿರ್ಬಂಧದ ಫಲವಾಗಿದೆ. ಬಹುತೇಕ ಜನಸಮುದಾಯ ನೆಲೆ ಕಳೆದುಕೊಂಡಿದ್ದು ಪ್ರಮುಖ ನಾಗರಿಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಗಾಝಾಕ್ಕೆ ನೆರವಿನ ಪ್ರವೇಶದ ಮೇಲೆ ಇಸ್ರೇಲ್‍ನ ಮುಂದುವರಿದಿರುವ ನಿರ್ಬಂಧದ ವ್ಯಾಪ್ತಿಯು ಮತ್ತು ಅದು ಯುದ್ಧವನ್ನು ಮುಂದುವರಿಸಿರುವ ವಿಧಾನವು ಹಸಿವನ್ನು ಯುದ್ಧಾಸ್ತ್ರವಾಗಿ ಬಳಸುವುದಕ್ಕೆ ಸಮವಾಗಿದೆ ಮತ್ತು ಇದು ಯುದ್ಧಾಪರಾಧವಾಗಿದೆ ಎಂದು ಟರ್ಕ್ ಹೇಳಿದ್ದಾರೆ.
ಗಾಝಾದ ಜನರ ಸಂಕಟ ಆತ್ಮಸಾಕ್ಷಿಗೆ ವಿರುದ್ಧವಾಗಿದೆ. ಇಸ್ರೇಲ್ ಹಸಿವನ್ನು ಯುದ್ಧಾಸ್ತ್ರವಾಗಿ ಬಳಸಿದೆಯೇ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಲಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರ ವಕ್ತಾರ ಜೆರೆಮಿ ಲಾರೆನ್ಸ್ ಜಿನೆವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಯುದ್ಧದಿಂದ ಜರ್ಝರಿತಗೊಂಡಿರುವ ಫೆಲೆಸ್ತೀನ್ ಪ್ರದೇಶದಲ್ಲಿ ಕ್ಷಾಮ ಸನ್ನಿಹಿತವಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಯುದ್ಧದ ಬಳಿಕ ಗಾಝಾದ ಸುಮಾರು 1.1 ದಶಲಕ್ಷ ಜನತೆ ಹಸಿವಿನ ದುರಂತಕ್ಕೆ ಸಾಕ್ಷಿಯಾಗಿದ್ದಾರೆ. ನೆರವಿನ ಪೂರೈಕೆ ಹೆಚ್ಚದಿದ್ದರೆ ಯುದ್ಧದಿಂದ ಜರ್ಝರಿತಗೊಂಡಿರುವ ಉತ್ತರ ಗಾಝಾದಲ್ಲಿ ಸುಮಾರು 3 ಲಕ್ಷ ಜನತೆ ಕ್ಷಾಮದ ದವಡೆಗೆ ಸಿಲುಕಲಿದ್ದಾರೆ ಎಂದು ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆದ ಆಹಾರ ಭದ್ರತೆ ಪರಿಶೀಲನಾ ತಂಡದ ವರದಿ ಹೇಳಿದೆ.
ಈಗಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತೀ ದಿನ 200ಕ್ಕೂ ಅಧಿಕ ಜನರು ಹಸಿವಿನಿಂದ ಸಾಯಬಹುದು ಎಂದು ವಿಶ್ವಸಂಸ್ಥೆ ಮಾನವೀಯ ನೆರವು ಏಜನ್ಸಿ (ಒಸಿಎಚ್‍ಎ)ಯ ವಕ್ತಾರ ಜೆನ್ಸ್ ಲಾರ್ಕೆ ಹೇಳಿದ್ದಾರೆ.
ಈಗ ಕ್ಷಣಗಣನೆ ಆರಂಭವಾಗಿದೆ. ಹಸಿವಿನಿಂದ ಬಳಲುವುದನ್ನು ತಡೆಯಲು ಮತ್ತು ಬರಗಾಲದ ಅಪಾಯವನ್ನು ದೂರಗೊಳಿಸಲು, ಅತ್ಯಗತ್ಯ ಮಾನವೀಯ ನೆರವು ಹಾಗೂ ವಾಣಿಜ್ಯ ಸರಕು ಫೆಲೆಸ್ತೀನ್ ಪ್ರದೇಶವನ್ನು ಸರಾಗವಾಗಿ ಪ್ರವೇಶಿಸಲು ಮತ್ತು ಅಡೆತಡೆಯಿಲ್ಲದೆ ವಿತರಣೆಯಾಗಲು ಇಸ್ರೇಲ್ ಕ್ರಮ ಕೈಗೊಳ್ಳಬೇಕೆಂದು ಎಲ್ಲರೂ, ವಿಶೇಷವಾಗಿ ಪ್ರಭಾವಿಗಳು ಆಗ್ರಹಿಸಬೇಕೆಂದು ಟರ್ಕ್ ಒತ್ತಾಯಿಸಿದ್ದಾರೆ. ತಮ್ಮ ಕಚೇರಿ ಸೇರಿದಂತೆ ಕಳೆದ ತಿಂಗಳು ವಿಶ್ವಸಂಸ್ಥೆ ಮೊಳಗಿಸಿದ ಎಚ್ಚರಿಕೆಯ ಕರೆಗಂಟೆಯನ್ನು ಗಮನಿಸಲಾಗಿಲ್ಲ. ಗಾಝಾದ ದುರಂತ ಮಾನವ ನಿರ್ಮಿತ ಮತ್ತು ಇದನ್ನು ತಡೆಯಬಹುದಾಗಿದೆ ಎಂದವರು ಹೇಳಿದ್ದಾರೆ.