ಒಂದು ವಾರದ ಕದನವಿರಾಮದ ನಂತರ ಗಾಝಾ ಮೇಲೆ ಮತ್ತೆ ಬಾಂಬ್‌ ದಾಳಿ ಆರಂಭಿಸಿದ ಇಸ್ರೇಲ್

Update: 2023-12-01 08:58 GMT

Photo: PTI

ಟೆಲ್‌ ಅವೀವ್:‌ ಹಮಾಸ್‌ ಜೊತೆಗಿನ ಯುದ್ಧದಲ್ಲಿ ಒಂದು ವಾರದ ಕದನ ವಿರಾಮದ ನಂತರ ಇಸ್ರೇಲ್‌ನ ಮಿಲಿಟರಿ ಇಂದು ಮತ್ತೆ ಗಾಝಾ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಗಾಝಾ ನಗರದ ಮೇಲೆ ವಾಯು ದಾಳಿಗಳು ನಡೆಯುತ್ತಿವೆ. ಕದನವಿರಾಮ ವಿಸ್ತರಿಸುವ ನಿಟ್ಟಿನಲ್ಲಿ ಯಾವುದೇ ಒಪ್ಪಂದಕ್ಕೆ ಬಂದಿಲ್ಲವಾದ್ದರಿಂದ ಇಸ್ರೇಲ್‌ ತನ್ನ ದಾಳಿ ಆರಂಭಿಸಿದೆ.

“ಕದವಿರಾಮದ ವೇಳೆ ಹಮಾಸ್‌ ನಿಯಮ ಉಲ್ಲಂಘಿಸಿತ್ತು ಹಾಗೂ ಇಸ್ರೇಲಿ ನೆಲದ ಮೇಲೆ ದಾಳಿ ನಡೆಸಿತ್ತು. ಇಸ್ರೇಲ್‌ ರಕ್ಷಣಾ ಪಡೆಗಳು ಹಮಾಸ್‌ ವಿರುದ್ಧದ ಕಾರ್ಯಾಚರಣೆಯನ್ನು ಗಾಝಾ ಪಟ್ಟಿಯಲ್ಲಿ ಮರುಆರಂಭಿಸಿವೆ” ಎಂದು ಇಸ್ರೇಲ್‌ನ ಸೇನಾ ವಕ್ತಾರರು ಹೇಳಿದ್ದಾರೆ.

ಗಾಝಾದಿಂದ ಉಡಾಯಿಸಲಾದ ರಾಕೆಟ್‌ ಒಂದನ್ನು ತಡೆದಿರುವುದಾಗಿ ಇಸ್ರೇಲ್‌ನ ಮಿಲಿಟರಿ ಹೇಳಿದ ಬೆನ್ನಲ್ಲೇ ದಾಳಿ ಪುನರಾರಂಭಿಸುವ ಘೋಷಣೆ ಮಾಡಲಾಗಿದೆ.

ಗಾಝಾದಲ್ಲಿ ಇಸ್ರೇಲಿ ಯುದ್ಧವಿಮಾನಗಳು ದಾಳಿ ನಡೆಸುತ್ತಿವೆ ಎಂದು ವರದಿಯಾಗಿದೆ. ದಕ್ಷಿಣ ಗಾಝಾದಲ್ಲಿ ಡ್ರೋನ್‌ಗಳ ಹಾರಾಟವೂ ಕಂಡುಬಂದಿದೆ.

ಕದನವಿರಾಮದ ವೇಳೆ ಇಸ್ರೇಲ್‌ನ ಹಲವು ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆಗೊಳಿಸಿದ್ದರೆ ಫೆಲೆಸ್ತೀನಿ ಕೈದಿಗಳನ್ನು ಇಸ್ರೇಲ್‌ ಬಿಡುಗಡೆಗೊಳಿಸಿತ್ತು. ಏಳು ದಿನಗಳ ಕದನವಿರಾಮ ವಿಸ್ತರಿಸಬಹುದೆಂಬ ಆಶಾವಾದಗಳು ಇಂದಿನ ದಾಳಿ ಪುನರಾರಂಭದಿಂದ ಕ್ಷೀಣಗೊಂಡಿದೆ. ಕದನ ವಿರಾಮದ ವೇಳೆ ಒಟ್ಟು 80 ಇಸ್ರೇಲಿಯರನ್ನು ಬಿಡುಗಡೆಗೊಳಿಸಲಾಗಿದ್ದರೆ, ಇಸ್ರೇಲ್‌ 240 ಫೆಲೆಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News