ಗಾಝಾ ಮೇಲಿನ ದಾಳಿಯಲ್ಲಿ ಇಸ್ರೇಲ್‌ನಿಂದ ಬಿಳಿ ರಂಜಕ ಅಸ್ತ್ರ ಬಳಕೆ: ಹ್ಯೂಮನ್‌ ರೈಟ್ಸ್‌ ವಾಚ್‌ ಆರೋಪ

Update: 2023-10-13 09:53 GMT

Photo:X/@hrw

ಹೊಸದಿಲ್ಲಿ: ಗಾಝಾ ಮತ್ತು ಲೆಬನಾನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳ ವೇಳೆ ಇಸ್ರೇಲ್‌ ಬಿಳಿ ರಂಜಕ ಬಾಂಬ್‌ಗಳನ್ನು ಬಳಸಿದೆ ಎಂದು ‘ಹ್ಯೂಮನ್‌ ರೈಟ್ಸ್‌ ವಾಚ್‌’ ಆರೋಪಿಸಿದೆ. ಇಂತಹ ಅಸ್ತ್ರಗಳ ಬಳಕೆಯಿಂದ ನಾಗರಿಕರ ಮೇಲೆ ಅಪಾಯ ಹೆಚ್ಚುತ್ತದೆ ಹಾಗೂ ದೀರ್ಘಕಾಲಿಕ ಗಾಯಗಳಿಗೆ ಕಾರಣವಾಗುತ್ತದೆ ಎಂದು ಸಂಘಟನೆ ತಿಳಿಸಿದೆ.

ಆದರೆ ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲ್‌ ಮಿಲಿಟರಿ, ಪ್ರಸ್ತುತ ಗಾಝಾದಲ್ಲಿ ಬಿಳಿ ರಂಜಕ ಹೊಂದಿದ ಶಸ್ತ್ರಾಸ್ತ್ರಗಳನ್ನು ಬಳಸಿದ ಬಗ್ಗೆ ತಿಳಿದಿಲ್ಲ ಎಂದು ಹೇಳಿದೆ. ಆದರೆ ಬಿಳಿ ರಂಜಕವನ್ನು ಲೆಬನಾನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಲಾಗಿದೆಯೇ ಎಂಬ ಪ್ರಶ್ನೆಗೆ ಇಸ್ರೇಲ್‌ ಮಿಲಿಟರಿ ಉತ್ತರಿಸಿಲ್ಲ.

ಅಕ್ಟೋಬರ್‌ 10ರಂದು ಲೆಬನಾನ್‌ನಲ್ಲಿ ಹಾಗೂ ಅಕ್ಟೋಬರ್‌ 11ರಂದು ಗಾಝಾದಲ್ಲಿ ತೆಗೆಯಲಾದ ವೀಡಿಯೋಗಳನ್ನು ತಾನು ಪರಿಶೀಲಿಸಿರುವುದಾಗಿ ಹ್ಯೂಮನ್‌ ರೈಟ್ಸ್‌ ವಾಚ್‌ ಹೇಳಿದ್ದು ಆ ವೀಡಿಯೋಗಳಲ್ಲಿ ಗಾಝಾ ನಗರ ಬಂದರು ಮತ್ತು ಇಸ್ರೇಲ್-ಲೆಬನಾನ್‌ ಗಡಿಯ ಭಾಗದ ಎರಡು ಗ್ರಾಮೀಣ ಭಾಗಗಳಲ್ಲಿ ಬಿಳಿ ರಂಜಕ ಹೊಂದಿದ ಹಲವು ಶಸ್ತ್ರಗಳ ಬಳಕೆ ನೋಡಿರುವುದಾಗಿ ಹೇಳಿದೆ.

ಈ ವೀಡಿಯೋಗಳ ಲಿಂಕ್‌ ಅನ್ನೂ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದೆ. ಎರಡೂ ವೀಡಿಯೋಗಳು ಇಸ್ರೇಲ್-ಲೆಬನಾನ್‌ ಗಡಿ ಪ್ರದೇಶದ್ದಾಗಿದ್ದರೆ ಗಾಝಾದಲ್ಲಿನ ವೀಡಿಯೋವನ್ನು ಒದಗಿಸಲಾಗಿಲ್ಲ.

ಆದರೆ ಫೆಲೆಸ್ತೀನಿ ಟಿವಿ ವಾಹಿನಿಗಳು ಇತ್ತೀಚೆಗೆ ಪ್ರಸಾರ ಮಾಡಿದ ವೀಡಿಯೋಗಳಲ್ಲಿ ಆಗಸದಲ್ಲಿ ತೆಳುವಾದ ಬಿಳಿ ಹೊಗೆ ಗಾಝಾದಲ್ಲಿ ಕಾಣಿಸುತ್ತದೆ ಹಾಗೂ ಇವು ಬಿಳಿ ರಂಜಕದ ಪ್ರಯೋಗದಿಂದ ಎಂದು ನಂಬಲಾಗಿದೆ.

ಇಸ್ರೇಲ್‌ನ ಮಿಲಿಟರಿ ತಾನು 2008-2009 ರಲ್ಲಿ ಗಾಝಾದಲ್ಲಿ ಬಳಸಿದ್ದ ಬಿಳಿ ರಂಜಕ ಸ್ಮೋಕ್‌ಸ್ಕ್ರೀನ್‌ ಅಸ್ತ್ರಗಳನ್ನು ಕೈಬಿಡುವುದಾಗಿ 2013 ರಲ್ಲಿ ತಿಳಿಸಿತ್ತು.

ಇಂತಹ ಅಸ್ತ್ರಗಳನ್ನು ಕಾನೂನಾತ್ಮಕವಾಗಿ ಯುದ್ಧಭೂಮಿಗಳಲ್ಲಿ ಬಳಸಬಹುದಾಗಿದ್ದು ಇವು ಸ್ಮೋಕ್‌ಸ್ಕ್ರೀನ್‌ ಸೃಷ್ಟಿಸುತ್ತವೆ, ಗುರಿಗಳನ್ನು ಗುರುತಿಸಲು, ಬಂಕರ್‌ ಮತ್ತು ಕಟ್ಟಡಗಳನ್ನು ಸುಟ್ಟು ಹಾಕಲು ಬಳಕೆಯಾಗುತ್ತವೆ.

ಕಾನೂನಾತ್ಮಕವಾಗಿ ಬಳಕೆಗೆ ಆಸ್ಪದವಿರುವುದರಿಂದ ರಾಸಾಯನಿಕ ಅಸ್ತ್ರವಾಗಿ ಅಂತಾರಾಷ್ಟ್ರೀಯ ನಿಯಮಗಳಡಿಯಲ್ಲಿ ಅದನ್ನು ನಿಷೇಧಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News