ಇಸ್ರೇಲ್‍ನಲ್ಲಿ 48 ಗಂಟೆ ತುರ್ತು ಪರಿಸ್ಥಿತಿ ಜಾರಿ

Update: 2024-08-25 14:59 GMT

ಇಸ್ರೇಲ್‍ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ | Photo: AFP

ಜೆರುಸಲೇಮ್ : ದೇಶದ ಗಡಿಭಾಗದಲ್ಲಿ ವಿಶೇಷ ಪರಿಸ್ಥಿತಿ ನೆಲೆಸಿರುವುದರಿಂದ ದೇಶದಾದ್ಯಂತ 48 ಗಂಟೆಗಳ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ ಎಂದು ಇಸ್ರೇಲ್‍ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ರವಿವಾರ ಹೇಳಿದ್ದಾರೆ.

ತುರ್ತು ಪರಿಸ್ಥಿತಿ ಜಾರಿಗೊಳಿಸುವುದರಿಂದ ಗುಂಪು ಸೇರದಂತೆ ತಡೆಯುವುದು, ಕೆಲವು ಪ್ರದೇಶಗಳನ್ನು ಮುಚ್ಚುವುದು ಸೇರಿದಂತೆ ತನ್ನ ಪ್ರಜೆಗಳಿಗೆ ಸೂಚನೆ ನೀಡಲು ಇಸ್ರೇಲ್ ಭದ್ರತಾ ಪಡೆ(ಐಡಿಎಫ್)ಗೆ ಅವಕಾಶ ಇರುತ್ತದೆ. ಆದ್ದರಿಂದ ರವಿವಾರ ಬೆಳಿಗ್ಗೆ 6 ಗಂಟೆಯಿಂದ 48 ಗಂಟೆಯ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ ಎಂದವರು ಹೇಳಿದ್ದಾರೆ.

ಹಿಜ್ಬುಲ್ಲಾ ದಾಳಿಯ ಹಿನ್ನೆಲೆಯಲ್ಲಿ ಉತ್ತರ ಇಸ್ರೇಲ್‍ ನಾದ್ಯಂತ ವಾಯು ದಾಳಿ ಸೈರನ್ ಮೊಳಗಿದ್ದು ಬಾಂಬ್ ಶೆಲ್ಟರ್‍ಗಳ ಬಳಿ ತೆರಳುವಂತೆ ಪ್ರಜೆಗಳಿಗೆ ಸಲಹೆ ನೀಡಲಾಯಿತು. ಇಸ್ರೇಲ್‍ನ ಬೆನ್-ಗ್ಯುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು ವಿಮಾನಗಳನ್ನು ಬೇರೆ ನಿಲ್ದಾಣದತ್ತ ತಿರುಗಿಸಲಾಗಿದೆ. ಲೆಬನಾನ್‍ನ ಬೈರೂತ್‍ಗೆ ವಿಮಾನ ಪ್ರಯಾಣವನ್ನು ಅಮಾನತುಗೊಳಿಸಲಾಗಿದೆ ಎಂದು ಜೋರ್ಡಾನ್‍ನ ಸರಕಾರಿ ಸ್ವಾಮ್ಯದ `ರೋಯಲ್ ಜೋರ್ಡಾನ್' ಹೇಳಿದೆ.

ಹಿಜ್ಬುಲ್ಲಾ ದಾಳಿಯಿಂದ ಇಸ್ರೇಲ್‍ನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಇಸ್ರೇಲ್ ಸೇನಾಪಡೆಯ ವಕ್ತಾರ ಲೆ|ಕ| ನದಾವ್ ಶೊಶಾನಿ ಹೇಳಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಲೆಬನಾನ್ ಆರೋಗ್ಯ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News