ಗಾಝಾ ಯುದ್ಧವಿರಾಮ ಒಪ್ಪಂದ ತಿರಸ್ಕರಿಸಿದ ನೆತನ್ಯಾಹು

Update: 2024-05-06 07:18 GMT
Photo: PTI

ರಫಾ: ಮೂವರು ಇಸ್ರೇಲಿ ಸೈನಿಕರ ಹತ್ಯೆಗೆ ಕಾರಣವಾದ ಕೆರೆಮ್ ಶಲೋಮ್ ಗಡಿ ರಾಕೆಟ್ ದಾಳಿಯ ಹೊಣೆಯನ್ನು ಹಮಾಸ್ ಹೊತ್ತ ಬೆನ್ನಲ್ಲೇ, ಇಸ್ರೇಲ್ ರಫಾ ಪಟ್ಟಣದ ಮೇಲೆ ಮಿಂಚಿನ ದಾಳಿ ನಡೆಸಿದೆ. ದಾಳಿಯಲ್ಲಿ ಕನಿಷ್ಠ 19 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮ ಒಪ್ಪಂದವನ್ನು ತಿರಸ್ಕರಿಸಿದ್ದಾರೆ ಹಾಗೂ ಎನ್‍ಕ್ಲೇವ್‍ನಿಂದ ಇಸ್ರೇಲಿ ಸೇಣೆಯನ್ನು ಹಿಂತೆಗೆದುಕೊಳ್ಳಬೇಕು ಎಂಬ ಹಮಾಸ್ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಯುದ್ಧ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆ ಸ್ವೀಕಾರಾರ್ಹವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಮಾಸ್ ನಿಯಂತ್ರಣದ ಎನ್‍ಕ್ಲೇವ್‍ನಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಇಸ್ರೇಲ್ ಸೇನೆಯ ಪ್ರಕಾರ 10 ಪ್ರೊಜೆಕ್ಟೈಲ್‍ಗಳನ್ನು ರಫಾ ಕಡೆಯಿಂದ ಇದೀಗ ಮುಚ್ಚಲಾಗಿರುವ ಗಡಿಯತ್ತ ಉಡಾಯಿಸಲಾಗಿದೆ.

ಇಸ್ರೇಲ್‍ನ ಚಾನಲ್ 12 ವಾಹಿನಿಯ ವರದಿ ಪ್ರಕಾರ 10 ಮಂದಿ ಸೈನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಎಷ್ಟರವರೆಗೆ ಗಡಿಯನ್ನು ಮುಚ್ಚಲಾಗುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕದನ ವಿರಾಮ ಬಗೆಗಿನ ಕೊನೆಯ ಸುತ್ತಿನ ಮಾತುಕತೆ ಮುಗಿಯುತ್ತಿದ್ದಂತೆ ಈ ದಾಳಿ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News