ಗಾಝಾದ ಆಸ್ಪತ್ರೆಗೆ ಇಸ್ರೇಲಿ ಪಡೆಗಳ ಮುತ್ತಿಗೆ: ಆಮ್ಲಜನಕ ವ್ಯವಸ್ಥೆ ಕಡಿತದಿಂದ ಕನಿಷ್ಠ 4 ರೋಗಿಗಳು ಮೃತ್ಯು

Update: 2024-02-17 16:12 GMT

ಸಾಂದರ್ಭಿಕ ಚಿತ್ರ (PTI)

ರಫಾ: ಯುದ್ಧ ಪೀಡಿತ ದಕ್ಷಿಣ ಗಾಝಾದ ಮುಖ್ಯ ಆಸ್ಪತ್ರೆಗೆ ಇಸ್ರೇಲಿ ಪಡೆಗಳು ಗುರುವಾರ ಮುತ್ತಿಗೆ ಹಾಕಿದ್ದು, ಅಲ್ಲಿದ್ದ ನೂರಾರು ಸಿಬ್ಬಂದಿ ಹಾಗೂ ರೋಗಿಗಳು ಭಯಗ್ರಸ್ತರಾಗಿದ್ದಾರೆ. ಇಸ್ರೇಲಿ ಪಡೆಗಳು ಆಸ್ಪತ್ರೆಯ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನು ಕಡಿದುಹಾಕಿದ್ದರಿಂದ, ತೀವ್ರ ನಿಗಾ ಘಟಕ (ಐಸಿಯು)ದ ಕನಿಷ್ಠ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ. ಹಮಾಸ್ ಅಪಹರಿಸಿರುವ ಕೆಲವು ಒತ್ತೆಯಾಳುಗಳನ್ನು ಆಸ್ಪತ್ರೆಯಲ್ಲಿ ಬಚ್ಚಿಟ್ಟಿರ ಬೇಕೆಂಬ ಶಂಕೆಯಿಂದ ಇಸ್ರೇಲಿ ಪಡೆಗಳು ಮೇಲೆ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.

ಇಸ್ರೇಲಿ ಸೈನಿಕರು ಗುರುವಾರ ಆಸ್ಪತ್ರೆಗೆ ದಿಗ್ಬಂಧನ ವಿಧಿಸಿದ ಕೆಲವೇ ತಾಸುಗಳ ಮೊದಲು ಆಸ್ಪತ್ರೆ ಸಂಕೀರ್ಣದಲ್ಲಿ ಓರ್ವ ರೋಗಿಯನ್ನು ಹತ್ಯೆಗೈದಿದ್ದು, ಇತರ 6 ಮಂದಿಯನ್ನು ಗಾಯಗೊಳಿಸಿದ್ದಾರೆಂದು ವರದಿಗಳು ತಿಳಿಸಿವೆ.

ಒಂದು ವಾರದ ಹಿಂದೆ ಒತ್ತೆಯಾಳುಗಳ ಶೋಧ ಕಾರ್ಯಾಚರಣೆ ನಿರತ ಇಸ್ರೇಲಿ ಪಡೆಗಳು ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದ ನಾಸ್ಸರ್ ಆಸ್ಪತ್ರೆಗೆ ದಿಗ್ಬಂಧನ ವಿಧಿಸಿತ್ತು. ಅಲ್ಲಿದ್ದ ರೋಗಿಗಳು, ಸಿಬ್ಬಂದಿ ಮತ್ತಿತರರು ಆಹಾರ ಹಾಗೂ ನೀರಿಲ್ಲದೆ ಸಂಕಷ್ಟಕ್ಕೀಡಾಗಿದ್ದರು.

ಈ ಮಧ್ಯೆ ಗಾಝಾದಲ್ಲಿ ಕದನವಿರಾಮ ಕುರಿತಾಗಿ ನಡೆಯುತ್ತಿರುವ ಮಾತುಕತೆಗಳು ಸ್ಥಗಿತ ಗೊಂಡಿರುವುದಾಗಿ ತಿಳಿದುಬಂದಿದೆ. ಗಾಝಾ ಯುದ್ಧ ಅಂತ್ಯಗೊಂಡ ಬಳಿಕ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗಬೇಕೆಂಬ ಅಮೆರಿಕದ ನಿಲುವನ್ನು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ವಿರೋಧಿಸುತ್ತಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ ಗುರುವಾರ ರಾತ್ರಿ ಮಾತುಕತೆ ನಡೆಸಿದ್ದರು ಆನಂತರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದ ಪೋಸ್ಟ್ನಲ್ಲಿ, ಫೆಲೆಸ್ತೀನ್ ವಿವಾದದ ಶಾಶ್ವತ ಪರಿಹಾರಕ್ಕೆ ‘ಅಂತಾರಾಷ್ಟ್ರೀಯ ಆದೇಶ’ವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.

ಒಂದು ವೇಳೆ ಇತರ ದೇಶಗಳು ಫೆಲೆಸ್ತೀನ್ ಗೆ ರಾಷ್ಟ್ರದ ಮಾನ್ಯತೆ ನೀಡಿದಲ್ಲಿ ಅದು ಭಯೋತ್ಪಾದನೆಗೆ ನೀಡುವ ಬಹುಮಾನವಾಗಲಿದೆ ಎಂವರು ಹೇಳಿದರು. ಫೆಲೆಸ್ತೀನ್ ರಾಷ್ಟ್ರದ ಸೃಷ್ಟಿಯ ಪ್ರಸ್ತಾವವನ್ನು ತಾನು ತಿರಸ್ಕರಿಸುವುದಾಗಿ ನೆತನ್ಯಾಹು ‘ಎಕ್ಸ್’ನಲ್ಲಿ ಪುನರುಚ್ಚರಿಸಿದ್ದಾರೆ.

ಹಮಾಸ್ ಸಂಪೂರ್ಣವಾಗಿ ನಾಶವಾಗುವ ತನಕ ಹಾಗೂ ಎಲ್ಲಾ ಒತ್ತೆಯಾಳುಗಳು ಬಂಧಮುಕ್ತಿಗೊಳ್ಳುವವರೆಗೆ ಇಸ್ರೇಲ್ ಸೇನೆಯು ಆಕ್ರಮಣವನ್ನು ಮುಂದುವರಿಸಲಿದೆ ಹಾಗೂ ಈಜಿಪ್ಟ್ ಗಡಿ ಸಮೀಪದ ರಫಾ ನಗರದವರೆಗೂ ಅದನ್ನು ವಿಸ್ತರಿಸಲಿದೆ ಎಂವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News