ತೈಲ ದಾಸ್ತಾನು ಮಾಡಿದರೆ ಜೈಲು: ಮ್ಯಾನ್ಮಾರ್ ಆಡಳಿತ ಘೋಷಣೆ
ಯಾಂಗಾನ್: ದೇಶದಲ್ಲಿ ತೈಲದ ತೀವ್ರ ಕೊರತೆ ತಲೆದೋರಿದ ಹಿನ್ನೆಲೆಯಲ್ಲಿ ಲೈಸೆನ್ಸ್ ಪಡೆಯದೆ 180 ಲೀಟರಿಗಿಂತ ಅಧಿಕ ಪೆಟ್ರೋಲ್ ಸಂಗ್ರಹಿಸಿಟ್ಟುಕೊಂಡವರಿಗೆ ಜೈಲುಶಿಕ್ಷೆ ವಿಧಿಸುವುದಾಗಿ ಮ್ಯಾನ್ಮಾರ್ ಸೇನಾಡಳಿತ ಸೋಮವಾರ ಘೋಷಿಸಿದೆ.
ಲೈಸೆನ್ಸ್ ಪಡೆಯದೆ ಪೆಟ್ರೋಲ್ ಉತ್ಪನ್ನಗಳ ಸಂಗ್ರಹಣೆ ಮತ್ತು ಸಾಗಣೆ ಮಾಡುವುದನ್ನು ಪರಿಶೀಲಿಸುವ ಕಾರ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರ ರವಿವಾರ ಚಾಲನೆ ನೀಡಿದೆ. ಲೈಸೆನ್ಸ್ ಇಲ್ಲದೆ 180 ಲೀಟರ್ ಗೂ ಅಧಿಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಗ್ರಹಿಸುವಾಗ ಅಥವಾ ಸಾಗಿಸುವಾಗ ಸಿಕ್ಕಿಬಿದ್ದವರಿಗೆ 1 ವರ್ಷ ಜೈಲುಶಿಕ್ಷೆ, 2,370 ಡಾಲರ್ ದಂಡ ವಿಧಿಸಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿ `ಗ್ಲೋಬಲ್ ನ್ಯೂಲೈಟ್ ಆಫ್ ಮ್ಯಾನ್ಮಾರ್' ದಿನಪತ್ರಿಕೆ ವರದಿ ಮಾಡಿದೆ.
ಮ್ಯಾನ್ಮಾರ್ನ ಕರೆನ್ಸಿಯು ಡಾಲರ್ ಎದುರು ತೀವ್ರ ಅಪಮೌಲ್ಯಗೊಂಡಿರುವುದರಿಂದ ತೈಲ ಆಮದು ಮಾಡಿಕೊಳ್ಳಲು ಸಮಸ್ಯೆಯಾಗಿದೆ. ಇದೀಗ ಸೇನಾಡಳಿತದ ಹೊಸ ಆದೇಶವು ಕೈಗಾರಿಕೆಗಳು ಹಾಗೂ ಆಸ್ಪತ್ರೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.