ಜಪಾನ್ ಭೂಕಂಪ: ಮೃತರ ಸಂಖ್ಯೆ 50ಕ್ಕೇರಿಕೆ ; ಕಟ್ಟಡಗಳ ಅವಶೇಷಗಳ ನಡುವೆ ಸಿಲುಕಿದವರನ್ನು ರಕ್ಷಿಸಲು ಭರದ ಕಾರ್ಯಾಚರಣೆ

Update: 2024-01-02 17:27 GMT

ಸಾಂದರ್ಭಿಕ ಚಿತ್ರ (PTI) 

 

ಟೋಕಿಯೊ: ಹೊಸ ವರ್ಷದ ಮೊದಲ ದಿನವಾದ ಸೋಮವಾರ ಜಪಾನ್ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಬಲಿಯಾದವರ ಸಂಖ್ಯೆ 50ಕ್ಕೇರಿದೆ. ಕುಸಿದುಬಿದ್ದ ಮನೆ, ಕಟ್ಟಡಗಳ ಅವಶೇಷಗಳ ಹಲವಾರು ಮಂದಿ ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಪಾರು ಮಾಡಲು ರಕ್ಷಣಾ ಕಾರ್ಯಕರ್ತರು ಅಹರ್ನಿಶಿ ಶ್ರಮಿಸುತ್ತಿದ್ದಾರೆ.

ಹೊನ್ಶು ದ್ವೀಪದ ಇಶಿಕಾವಾ ಪ್ರಾಂತದಲ್ಲಿ ಸೋಮವಾರ 7.5 ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಮುದ್ರದಲ್ಲಿ ಹೆದ್ದೆರೆಗಳನ್ನು ಸೃಷ್ಟಿಸಿತ್ತು. ಭೂಕಂಪದ ತೀವ್ರತೆಗೆ ಹಲವಾರು ಮನೆಗಳು ಕಟ್ಟಡಗಳು ಮರಗಳು ಧರಾಶಾಯಿಯಾಗಿದ್ದವು. ಭಾರೀ ಅಗ್ನಿ ಅವಘಡವೂ ಉಂಟಾಗಿತ್ತಲ್ಲದೆ, ಹಲವೆಡೆ ರಸ್ತೆಗಳು ಕುಸಿದುಬಿದ್ದಿದ್ದವು, ವಾಹನಗಳು ಹಾನಿಗೀಡಾಗಿದ್ದವು.

ಭೂಕಂಪದ ಬಳಿಕ ನೂರಕ್ಕೂ ಅಧಿಕ ಪಶ್ಚಾತ್ಕಂಪನಗಳು ಸಂಭವಿಸಿದ್ದು, 62 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಆದೇಶಿಸಲಾಗಿತ್ತು.

ಭೂಕಂಪದ ಬಳಿಕ ಇಶಿಕಾವಾ ಪ್ರಾಂತದಲ್ಲಿ 33 ಸಾವಿರಕ್ಕೂ ಅಧಿಕ ಮನೆಗಳು ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡಿದೆ. ಅಲ್ಲದೆ ಹಲವಾರು ನಗರಗಳಲ್ಲಿ ನೀರು ಪೂರೈಕೆ ಸ್ತಬ್ಧವಾಗಿದೆ ಎಂದು ವರದಿಗಳು ತಿಳಿಸಿವೆ.

ಮಂಗಳವಾರ ಮುಂಜಾನೆ ಕೂಡಾ ಇಶಿಕಾವಾದಲ್ಲಿ ಪಶ್ಚಾತ್ ಕಂಪನಗಳು ಸಂಭವಿಸಿದ್ದು, ಆಗಾಗ್ಗೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಅಮೆರಿಕ ಭೌಗೋಳಿಕ ಸರ್ವೇಕ್ಷಣಾ ಏಜೆನ್ಸಿ ತಿಳಿಸಿದೆ. ಸೋಮವಾರದ ಭೂಕಂಪದ ಬಳಿಕ 1 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರು ಸೇನಾ ಶಿಬಿರಗಳಲ್ಲಿಯೇ ಉಳಿದುಕೊಂಡಿದ್ದಾರೆಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News