ಭಾರತೀಯ ಪ್ರವಾಸಿಗರಿಗೆ ಇ-ವೀಸಾ ಜಾರಿಗೊಳಿಸಿದ ಜಪಾನ್

Update: 2024-04-04 15:19 GMT

ಸಾಂದರ್ಭಿಕ ಚಿತ್ರ | Photo: PTI

ಟೋಕಿಯೊ: ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಇನ್ನು ಮುಂದೆ ಜಪಾನ್ಗೆ ಪ್ರಯಾಣಿಸಲು ಭೌತಿಕ ವೀಸಾ ಸ್ಟಿಕ್ಕರ್ ಅನ್ನು ಒಯ್ಯುವ ಅಗತ್ಯವಿಲ್ಲ. ಎಪ್ರಿಲ್ 1ರಿಂದ ಜಪಾನ್ ಭಾರತೀಯ ಪ್ರವಾಸಿಗರಿಗೆ ಇ-ವೀಸಾ ಒದಗಿಸುವುದಕ್ಕೆ ಚಾಲನೆ ನೀಡಿದೆ.

ಈ ಯೋಜನೆಯು ಪ್ರವಾಸಿಗರಿಗೆ ಪ್ರವಾಸೋದ್ಯಮ ಉದ್ದೇಶಕ್ಕಾಗಿ 90 ದಿನಗಳವರೆಗೆ ಜಪಾನ್ ಪ್ರವೇಶಿಸಲು ಅವಕಾಶ ಕಲ್ಪಿಸುತ್ತದೆ. ವಿಎಫ್ಎಸ್ ಗ್ಲೋಬಲ್ ನಿರ್ವಹಿಸುವ ಜಪಾನ್ ವೀಸಾ ಅರ್ಜಿ ಕೇಂದ್ರಗಳ ಮೂಲಕ ಇ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆಯೂ ಇದೇ ಪ್ರಕ್ರಿಯೆ ಜಾರಿಯಲ್ಲಿತ್ತು. ಆದರೆ ಇ-ವೀಸಾ ಯೋಜನೆಯಡಿ ಪಾಸ್ಪೋರ್ಟ್ಗೆ ಅಂಟಿಸುವ ಸಾಂಪ್ರದಾಯಿಕ ವೀಸಾದ ಬದಲು ಅರ್ಜಿದಾರರು ಇ-ವೀಸಾ ಪಡೆಯುತ್ತಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ತಮ್ಮ ಮೊಬೈಲ್ ಫೋನ್ ಮೂಲಕ `ವೀಸಾ ನೀಡಿಕೆ ಸೂಚನೆ'ಯನ್ನು ಅಧಿಕಾರಿಗಳಿಗೆ ತೋರಿಸಬೇಕು. ಸ್ಕ್ರೀನ್ಷಾಟ್, ಮುದ್ರಿತ ಪ್ರತಿ, ಪಿಡಿಎಫ್ ಪ್ರತಿಗಳನ್ನು ಪರಿಗಣಿಸುವುದಿಲ್ಲ. ಮೊಬೈಲ್ ಫೋನ್ಗೆ ಬಂದಿರುವ `ವೀಸಾ ನೀಡಿಕೆ ಸೂಚನೆ'ಯನ್ನು ತೋರಿಸುವುದು ಕಡ್ಡಾಯವಾಗಿದೆ. ಬ್ರೆಝಿಲ್, ತೈವಾನ್, ಸಿಂಗಾಪುರ, ಯುಎಇ, ದಕ್ಷಿಣ ಆಫ್ರಿಕಾ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಕಂಬೋಡಿಯಾ, ಸೌದಿ ಅರೆಬಿಯಾ, ಅಮೆರಿಕ ಮತ್ತು ಭಾರತದ ಪ್ರಜೆಗಳು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಜಪಾನ್ನ ಇ-ವೀಸಾ ವೆಬ್ಸೈಟ್ ಮೂಲಕ ಇ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಜಪಾನ್ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News