ಫ್ರಾನ್ಸ್ ಸಂಸತ್ ವಿಸರ್ಜಿಸಿದ ಮ್ಯಾಕ್ರೋನ್: ಜೂನ್ 30ಕ್ಕೆ ದಿಢೀರ್ ಚುನಾವಣೆ

Update: 2024-06-10 04:22 GMT

ಇಮ್ಯಾನ್ಯುಯಲ್ ಮ್ಯಾಕ್ರೋನ್ PC: X/AlertesInfos

ಪ್ಯಾರೀಸ್: ಯುರೋಪಿಯನ್ ಒಕ್ಕೂಟದ ಚುನಾವಣೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೋನ್ ಅವರ ಮೈತ್ರಿಕೂಟಕ್ಕೆ ಹೀನಾಯ ಸೋಲಾದ ಬೆನ್ನಲ್ಲೇ ಫ್ರಾನ್ಸ್ ಸಂಸತ್ ವಿಸರ್ಜಿಸಲಾಗಿದೆ. ರಾಷ್ಟ್ರೀಯ ಅಸೆಂಬ್ಲಿಗೆ ದಿಢೀರ್ ಚುನಾವಣೆ ಘೋಷಿಸಲಾಗಿದೆ. ರಾಷ್ಟ್ರೀಯ ಅಸೆಂಬ್ಲಿಗೆ ಮೊದಲ ಸುತ್ತಿನ ಚುನಾವಣೆ ಜೂನ್ 30ರಂದು ಮತ್ತು 2ನೇ ಸುತ್ತಿನ ಚುನಾವಣೆ ಜುಲೈ 7ರಂದು ನಡೆಯಲಿದೆ ಎಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮ್ಯಾಕ್ರೋನ್ ಹೇಳಿದ್ದಾರೆ.

"ಯೂರೋಪ್ ಖಂಡವನ್ನು ಸಂರಕ್ಷಿಸಿಕೊಂಡು ಬಂದ ಪಕ್ಷಕ್ಕೆ ಈ ಫಲಿತಾಂಶ ಆಶಾದಾಯಕವಲ್ಲ" ಎಂದು ಯೂರೋಪಿಯನ್ ಒಕ್ಕೂಟದ ಚುನಾವಣೆಯಲ್ಲಿ ಸೋಲಿನ ಬಳಿಕ ಅವರು ಪ್ರತಿಕ್ರಿಯಿಸಿದರು. ಈ ಚುನಾವಣೆಯಲ್ಲಿ ನ್ಯಾಷನಲ್ ರ್ಯಾಲಿ ಎಂಬ ಬಲಪಂಥೀಯ ಪಕ್ಷ ಶೇಕಡ 40ರಷ್ಟು ಮತಗಳನ್ನು ಗಳಿಸಿತ್ತು.

"ಬಲಪಂಥೀಯ ಪಕ್ಷ ಯೂರೋಪ್ ಖಂಡದ ಎಲ್ಲೆಡೆ ಪ್ರಗತಿ ಕಾಣುತ್ತಿದೆ. ಇದು ನಾನು ಸ್ವತಃ ರಾಜೀನಾಮೆ ನೀಡಲಾಗದ ಸ್ಥಿತಿ. ಆದ್ದರಿಂದ ನಾನು ಆಯ್ಕೆಯನ್ನು ನಿಮಗೆ ಬಿಡುತ್ತಿದ್ದೇನೆ. ಆದ್ದರಿಂದ ನಾನು ರಾತ್ರಿಯೇ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸುತ್ತಿದ್ದೇನೆ. ಈ ನಿರ್ಧಾರ ಗಂಭೀರ ಮತ್ತು ಭಾರವಾದದ್ದು. ಆದರೆ ಇದು ವಿಶ್ವಾಸದ ಕ್ರಮ. ಭವಿಷ್ಯದ ಪೀಳಿಗೆಗಳಿಗಾಗಿ ಉತ್ತಮ ಆಯ್ಕೆಯನ್ನು ಮಾಡಿ ಎಂದು ಫ್ರಾನ್ಸ್ನ ಆತ್ಮೀಯ ಜನತೆಯನ್ನು ಕೋರುತ್ತಿದ್ದೇನೆ " ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News